ಉಡುಪಿ: ಎಂಡೋಸಲ್ಫಾನ್ ಪೀಡಿತರ ಪುನರ್ವಸತಿ ಕೇಂದ್ರಕ್ಕೆ ಅನುದಾನ ಒದಗಿಸಲು ಆಗ್ರಹಿಸಿ ಧರಣಿ

Update: 2020-11-04 10:05 GMT

ಉಡುಪಿ, ನ.4: ಜಿಲ್ಲಾ ಎಂಡೋಸಲ್ಫಾನ್ ಸಮಿತಿಯ ನಿರ್ಣಯದಂತೆ 2017ರಲ್ಲಿ ಕುಂದಾಪುರ ತಾಲೂಕಿನ ನಾಡಾ ಗ್ರಾಪಂ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಐದು ಎಕರೆ ಜಾಗದಲ್ಲಿ ಎಂಡೋ ಪೀಡಿತರ ಪುನರ್ವಸತಿ ಕೇಂದ್ರ ನಿರ್ಮಿಸಲು ಸರಕಾರ ತಕ್ಷಣ ಅನುದಾನ ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗ ವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ ಒತ್ತಾಯಿಸಿದ್ದಾರೆ.

ಎಂಡೋಸಲ್ಫಾನ್ ಪೀಡಿತರ ಮತ್ತು ಇತರ ವಿಕಲಚೇತನರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇಲ್ಲಿ ಪುನರ್ವಸತಿ ಕೇಂದ್ರದ ಕಟ್ಟಡ ಮತ್ತು ಸಲಕರಣೆಗಾಗಿ ಆರೋಗ್ಯ ಇಲಾಖೆ ಸರಕಾರಕ್ಕೆ 11 ಕೋಟಿ ರೂ. ಪ್ರಸ್ತಾವ ಕಳುಹಿಸಿದೆ. ಆದರೆ ಸರಕಾರ ಈವರೆಗೆ ಇದಕ್ಕೆ ಅನುದಾನ ಮಂಜೂರು ಮಾಡಿಲ್ಲ. ಇದರ ಪರಿಣಾಮ ಈ ಜಾಗ ಇದೀಗ ಸ್ಮಶಾನವಾಗಿ ಪರಿವರ್ತನೆಯಾಗಿದೆ ಎಂದವರು ದೂರಿದರು.

ಎಂಡೋಸಲ್ಫಾನ್ ಪೀಡಿತರಿಗೆ ನೀಡುವ ಮಾಸಾಶನವನ್ನು ಕ್ರಮವಾಗಿ 1,500 ರೂ.ನಿಂದ 3000 ರೂ.ಗೆ, 3,000ದಿಂದ 6000 ರೂ.ಗೆ ಹೆಚ್ಚಿಸಬೇಕು. ತೀವ್ರತರದ ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥ ವಿಕಲಚೇತನರನ್ನು ನೋಡಿಕೊಳ್ಳುವ ಪಾಲಕರಿಗೆ ಮಾನಸಿಕ ಕನಿಷ್ಠ 3,000 ರೂ. ನೀಡಬೇಕು ಮತ್ತು ಈ ಹಿಂದಿನಂತೆ ವಿಮಾ ಸೌಲಭ್ಯ ಮುಂದುವರಿಸಬೇಕು.ಶಾಸಕರ ಅನುದಾನದಲ್ಲಿ ಒದಗಿಸುವ ಸೌಲಭ್ಯವನ್ನು ಎಲ್ಲ 21 ರೀತಿಯ ವಿಕಲಚೇತನರಿಗೂ ಒದಗಿಸಬೇಕು. ಜಿಲ್ಲಾಧಿಕಾರಿಗಳ ಜಿಲ್ಲಾಮಟ್ಟದ ಸಮಿತಿಗೆ ವಿಕಲಚೇತನರ ಪಾಲಕರನ್ನು ಸೇರಿಸಿಕೊಳ್ಳಬೇಕು ಮತ್ತು ಸಮಿತಿಯ ಸದಸ್ಯರನ್ನು ಅವಧಿಯ ನಂತರ ಕಾಲಕಾಲಕ್ಕೆ ಬದಲಾವಣೆ ಮಾಡಬೇಕು. ನಿವೇಶನರಹಿತ ಅಂಗವಿಕಲರಿಗೆ ನಿವೇಶನ ನೀಡುವ ಯೋಜನೆಯನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಎಂಡೋ ಸಂತ್ರಸ್ತರಿಗೆ ಖಾಸಗಿ ಬಸ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಬಸ್ ಮಾಲಕರಿಗೆ ಆದೇಶ ನೀಡಬೇಕು. ಅಂಗವಿಕಲ ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್ ಒದಗಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್ ಕಾರಣಕ್ಕೆ ಸ್ಥಗಿತಗೊಳಿಸಿರುವ ವಿಕಲಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿಯನ್ನು ಪುನಾರಂಭಿಸಲು ವೈದ್ಯಕೀಯ ಪ್ರಾಧಿಕಾರಕ್ಕೆ ಆದೇಶಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ವಿಕಲಚೇತನರ ಭವನಕ್ಕಾಗಿ ಸ್ಥಳವನ್ನು ಒದಗಿಸುವುದರೊಂದಿಗೆ ನಗರಸಭೆಯ ಶೇ.5 ಅನುದಾನದಲ್ಲಿ ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಾರ್, ಕಾರ್ಯದರ್ಶಿ ಕೃಷ್ಣ ಪೂಜಾರಿ, ಜೊತೆ ಕಾರ್ಯದರ್ಶಿ ನಾರಾಯಣ ಶೇರುಗಾರ, ಕೋಶಾಧಿಕಾರಿ ಬಾಬು ದೇವಾಡಿಗ, ಪಾಲಕರ ಪ್ರತಿನಿಧಿ ಇಂದಿರಾ ಹೆಗ್ಡೆ, ಗಣಪತಿ ಪೂಜಾರಿ, ಅನಿತಾ, ರಾಧಾಕೃಷ್ಣ, ಜಗದೀಶ್ ಭಟ್, ಕೃಷ್ಣ ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News