ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಧಾರ್ಮಿಕ ಭಾವನೆಗಳಿಗೆ ಘಾಸಿ ಸ್ವೀಕಾರ್ಹವಲ್ಲ: ಸಗೀರ್ ಅಹ್ಮದ್ ರಶಾದಿ

Update: 2020-11-04 14:49 GMT

ಬೆಂಗಳೂರು, ನ.4: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೊಬ್ಬರೂ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವುದಾಗಲಿ, ಧಾರ್ಮಿಕ ವ್ಯಕ್ತಿತ್ವಗಳ ಅವಹೇಳನ ಮಾಡುವುದು ಸ್ವೀಕಾರ್ಹವಲ್ಲ ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ತಿಳಿಸಿದರು.

ಬುಧವಾರ ನಗರದ ಗೋವಿಂದಪುರದಲ್ಲಿರುವ ದಾರುಲ್ ಉಲೂಮ್ ಸಬೀಲುರ್ರಶಾದ್(ಅರೆಬಿಕ್ ಕಾಲೇಜ್)ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇಸ್ಲಾಮ್ ಧರ್ಮ, ಪ್ರವಾದಿ ಮುಹಮ್ಮದ್(ಸ) ಕುರಿತು ನಿಂದನಾತ್ಮಕ, ಅವಹೇಳನಕಾರಿ ವ್ಯಂಗ್ಯಚಿತ್ರಗಳನ್ನು ಪ್ರಕಟ ಮಾಡುವ ಮೂಲಕ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ನಡೆದುಕೊಂಡು ಬಂದಿದೆ ಎಂದರು.

ಇತ್ತೀಚೆಗೆ ಫ್ರಾನ್ಸ್ ನಲ್ಲಿಯೂ ಪ್ರವಾದಿ ಮುಹಮ್ಮದ್(ಸ) ಕುರಿತು ಚಾರ್ಲಿ ಹೆಬ್ಡೊ ವ್ಯಂಗ್ಯಚಿತ್ರ ರಚಿಸಿ ಅವಹೇಳನ ಮಾಡುವ ಪ್ರಯತ್ನ ನಡೆಸಿದ್ದಾರೆ. ಇದನ್ನು ಖಂಡಿಸಬೇಕಾದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್, ದುರಾದೃಷ್ಟವಶಾತ್ ಅವಹೇಳನ ಮಾಡುವವರಿಗೆ ಬೆಂಬಲ ನೀಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದು ಅವರು ಹೇಳಿದರು.

ಪ್ರವಾದಿ ಮುಹಮ್ಮದ್(ಸ) ಇಡೀ ಜಗತ್ತಿಗೆ ಶಾಂತಿ, ಭ್ರಾತೃತ್ವದ ಸಂದೇಶ ಸಾರಿದವರು. ಅಂತಹ ವ್ಯಕ್ತಿತ್ವವನ್ನು ಟೀಕಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಅದೇ ಮತ್ತೊಂದೆಡೆ ಈ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು, ಧರಣಿಗಳು ನಡೆದಿವೆ. ಆದರೆ, ಕಾನೂನು ಕೈಗೆತ್ತಿಕೊಂಡು ಹಿಂಸಾಕೃತ್ಯ ನಡೆಸಿ, ಅಮಾಯಕರನ್ನು ಕೊಲ್ಲುವುದು ಸರಿಯಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಮುಫ್ತಿ ಶಂಸುದ್ದೀನ್ ಬಜ್ಲಿ ಖಾಸ್ಮಿ, ಮೌಲಾನ ಏಜಾಝ್ ಅಹ್ಮದ್ ನದ್ವಿ, ಡಾ.ಬೆಳಗಾಮಿ ಮುಹಮ್ಮದ್ ಸಾದ್, ಮೌಲಾನ ವಹೀದುದ್ದೀನ್ ಖಾನ್ ಉಮ್ರಿ ಹಾಗೂ ಮೌಲಾನ ಅಬ್ದುಲ್ ರಹೀಮ್ ರಶೀದಿ ಖಾಸ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News