ಸಂತ್ರಸ್ತರು ಶೀಘ್ರ ಅರ್ಜಿ ಸಲ್ಲಿಸಲು ನ್ಯಾಯಾಧೀಶ ಮುರಳೀಧರ್ ಸೂಚನೆ
ಮಂಗಳೂರು, ನ.4: ಘನತ್ಯಾಜ್ಯ ಹರಿದು ನಷ್ಟಗೊಂಡ ಪಚ್ಚನಾಡಿ ಸುತ್ತಮುತ್ತಲಿನ ಸಂತ್ರಸ್ತರು ಪರಿಹಾರದ ಅರ್ಜಿಗಳನ್ನು ನೇರವಾಗಿ ಸೂಕ್ತ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಮುರಳೀಧರ್ ವೈ.ಬಿ ಅವರು ತಿಳಿಸಿದರು.
ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಾಮಂಜೂರು ಸಮೀಪದ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರಶಾಲೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಘನತ್ಯಾಜ್ಯ ಭೂಭರ್ತಿಯಿಂದ ನಷ್ಟಗೊಂಡ ಸಂತ್ರಸ್ತರಿಗೆ ಕಾನೂನು ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನ ತ್ಯಾಜ್ಯ, ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತದಿಂದ ಸಂತ್ರಸ್ಥರು ತಮಗಾದ ನಷ್ಟದ ಬಗ್ಗೆ ಪಾಲಿಕೆಗೆ ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೇರವಾಗಿ ಅರ್ಜಿ ಸಲ್ಲಿಸ ಬೇಕೆಂದ ಅವರು ಕೆಲವು ಮಧ್ಯವರ್ತಿಗಳು ಹೆಚ್ಚಿನ ಪರಿಹಾರ ಕೊಡಿಸುವುದಾಗಿ ವಂಚನೆ ಮಾಡುವ ಬಗ್ಗೆ ಕೇಳಿ ಬರುತ್ತಿದೆ. ಸಂತ್ರಸ್ತರು ಇದಕ್ಕೆ ಅಸ್ಪದ ನೀಡದೆ ತಮಗಾದ ನಷ್ಟದ ಬಗ್ಗೆ ವಿವರದೊಂದಿಗೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಸಂತೋಷ್ ಕುಮಾರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಜಿ. ಶಿಲ್ಪಾ, ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ನ್ಯಾಯವಾದಿ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.