​ಬಸ್ ಮಾಲಕನ ಹತ್ಯೆಗೆ ವಿಫಲ ಸಂಚು: ತನಿಖೆಗೆ ಮೂರು ತಂಡ ರಚನೆ

Update: 2020-11-04 15:45 GMT

ಉಡುಪಿ, ನ.4: ಎಕೆಎಂಎಸ್ ಬಸ್ ಮಾಲಕ ಸೈಫ್ ಆಲಿಯಾಸ್ ಸೈಫುದ್ದೀನ್ ಆತ್ರಾಡಿ ಎಂಬವರ ಹತ್ಯೆಗೆ ಸಂಚು ರೂಪಿಸಿದ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳೊಂದಿಗೆ ಇಂದು ಬೆಳಗ್ಗೆ ಮಣಿಪಾಲ ದಲ್ಲಿರುವ ಅವರ ಕಚೇರಿಗೆ ಆಗಮಿಸಿ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.

ಇಂದು ಬೆಳಗ್ಗೆ ಸೈಫುದ್ದೀನ್ ಇಲ್ಲದ ಸಂದರ್ಭ ಅವರ ಕಚೇರಿಗೆ ಕಾರಿನಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು, ಅಲ್ಲಿರುವ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ಕೈಯಲ್ಲಿ ಮಾರಕಾಯುಧ ಗಳಿರುವುದಾಗಿ ದೂರಲಾಗಿದೆ. ಇವರು ಸೈಫುದ್ದೀನ್ ಅವರ ಹತ್ಯೆಗೆ ಸಂಚು ರೂಪಿಸಿ ಬಂದಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಈ ದೂರಿನ ಬಗ್ಗೆ ತನಿಖೆ ನಡೆಯುತ್ತಿದ್ದು, ಎಷ್ಟು ಮಂದಿ ದುಷ್ಕರ್ಮಿಗಳು ಬಂದಿದ್ದಾರೆ ಎಂಬುದರ ಬಗ್ಗೆ ಸಿಸಿಟಿವಿ ಫುಟೇಜ್‌ಗಳನ್ನು ಪರಿಶೀಲಿ ಸಲಾಗುತ್ತಿದೆ. ಈ ಬಗ್ಗೆ ತನಿಖೆಗಾಗಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಮಂಜಪ್ಪ, ಮಣಿಪಾಲ ನಿರೀಕ್ಷಕ ಮಂಜುನಾಥ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡ ಬೇರೆ ಬೇರೆ ಕಡೆಗಳಿಗೆ ತೆರಳಿ ತನಿಖೆ ನಡೆಸುತ್ತಿದೆ’ ಎಂದು ಉುಪಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

2020ರ ಫೆ.9ರಂದು ಬೆಳ್ಳಂಪಳ್ಳಿಯಲ್ಲಿ ನಡೆದ ಮುಂಬೈ ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್ ಕೊಲೆ, 2016ರ ಜು.14ರಂದು ನಡೆದ ಕೆಮ್ಮಣ್ಣುವಿನ ಶೇಖ್ ಮಹಮ್ಮದ್ ತಸ್ಲೀಮ್ ಕೊಲೆ ಪ್ರಕರಣಗಳಲ್ಲಿ ಸೈಫುದ್ದೀನ್ ಆರೋಪಿಯಾಗಿದ್ದನು. ಹೀಗೆ ಸೈಫುದ್ದೀನ್ ವಿರುದ್ಧ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಶಿಷ್ಟ ಕೊಲೆ ಪ್ರಕರಣದಲ್ಲಿ ಸೈಫ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News