ಕಾಂಗ್ರೆಸ್‌ನ ಹಳೆ ಕಾಯಿಲೆಗೆ ಔಷಧಿ ಇಲ್ಲ : ಸಿ.ಟಿ. ರವಿ ವ್ಯಂಗ್ಯ
ಮಂಗಳೂರು, ನ.5: ಶಿರಾ ಉಪ ಚುನಾವಣೆಯಲ್ಲಿ ಸೋಲು ಖಾತ್ರಿಯಾಗುತ್ತಿರುವಂತೆಯೇ ಕಾಂಗ್ರೆಸ್ ತನ್ನ ಹಳೆ ವರಸೆಯನ್ನು ತೆಗೆದಿದೆ. ಚುನಾವಣೆ ಗೆದ್ದಾಗ ಜನಾದೇಶ ಎನ್ನುವ ಕಾಂಗ್ರೆಸ್, ಸೋತಾಗ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತದೆ. ಕಾಂಗ್ರೆಸ್‌ನ ಈ ಹಳೆ ಕಾಯಿಲೆಗೆ ಔಷಧಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಪ್ರಸ್ತುತ ಸುಧಾರಣೆಯ ಪರ್ವ ಎಂದು ಹೇಳಿದ ಅವರು, ಆದರೆ ವಿಪಕ್ಷ ಎಲ್ಲಾ ವಿಷಯಗಳಲ್ಲೂ ಅನುಮಾನ ವ್ಯಕ್ತಪಡಿಸುತ್ತಾ ತನ್ನ ಹಳೆ ಚಾಳಿಯನ್ನು ಮುಂದುವರಿಸುತ್ತಿದೆ. ಆಯೋಧ್ಯೆ ತೀರ್ಪು, ಸಿಬಿಐ, ಸೈನಿಕರ ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವುದು ಔಷಧಿಯಿಲ್ಲದ ಕಾಯಿಲೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಹವಾಸದಿಂದ ಶಿವಸೇನೆ ಪ್ರಜಾಪ್ರಭುತ್ವದ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ತುರ್ತು ಪರಿಸ್ಥಿತಿಯ ಕೆಟ್ಟ ಅನುಭವದಿಂದ ಕಾಂಗ್ರೆಸ್ ಇನ್ನೂ ಪಾಠ ಕಲಿತಿಲ್ಲ ಎಂದು ಹೇಳಿದ ಅವರು, ಪತ್ರಕರ್ತನ ಬಂಧನದ ಮೂಲಕ ಪ್ರಜಾಪ್ರಭುತ್ವದ ಧ್ವನಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದನ್ನು ಖಂಡಿಸುವುದಾಗಿ ಹೇಳಿದರು.
ಸಮಾಜವಾದದ ಹೆಸರಿನಲ್ಲಿ ಮಜಾವಾದ, ಪ್ರಾಮಾಣಿಕತೆ ಹೆಸರಿನಲ್ಲಿ ಭ್ರಷ್ಟಾಚಾರ ಕಾಂಗ್ರೆಸ್ ಜಾಯಮಾನ ಎಂದು ಹೇಳಿದ ಅವರು, ಸ್ವಾತಂತ್ರ ನಂತರದ ಭಾರತದಲ್ಲಿ ಪ್ರಜಾಪ್ರಭುತ್ವದ ನೈಜ ಆಶಯವನ್ನೇ ಬದಲಾಯಿಸಿರುವ ಕಾಂಗ್ರೆಸ್ ಕುಟುಂಬದಿಂದ , ಕುಟುಂಬಕ್ಕಾಗಿ ಕುಟುಂಬಕ್ಕೋಸ್ಕರ ಎಂಬುದಾಗಿ ಬದಾಯಿಸಿಕೊಂಡಿದೆ ಎಂದು ಆರೋಪಿಸಿದರು.
ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದ್ದು, ಅಲ್ಲೂ ಕಾಂಗ್ರೆಸ್ ಮುಕ್ತ ಆಗಲಿದೆ. ಕರ್ನಾಟಕ ಬಿಜೆಪಿಯ ಭದ್ರ ಕೋಟೆಯಾಗಿದ್ದರೆ, ಕೇರಳದಲ್ಲಿ ಪಕ್ಷದ ಸಂಘಟನೆಗಾಗಿ ಕಾರ್ಯಕರ್ತರು ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ತಮಿಳುನಾಡಿನ ಸ್ಥಿತಿಯೂ ಭಿನ್ನವಾಗಿಲ್ಲ. ಕರ್ನಾಟಕದ ಸಂಘಟನಾತ್ಮಕ ಶಕ್ತಿಯ ಜತೆಯಲ್ಲೇ ದಕ್ಷಿಣ ಭಾರತದಲ್ಲಿಯೂ ಬಿಜೆಪಿ ಪಕ್ಷ ಬಲವೃದ್ಧಿಗೊಳ್ಳಲಿದೆ ಎಂದು ಸಿ.ಟಿ. ರವಿ ಹೇಳಿದರು.