ಉಡುಪಿ: ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧಗೊಂಡಿದೆ ಸುಸಜ್ಜಿತ ಕೊಠಡಿ

Update: 2020-11-05 13:25 GMT

ಉಡುಪಿ, ನ.5: ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ, ಇದುವರೆಗೆ ಕೋಟ್ಯಾಂತರ ಮಂದಿಯನ್ನು ಆವರಿಸಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಲು ಕೊರೋನಾ ಪ್ರಾರಂಭಗೊಂಡ ದಿನದಿಂದ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಕಂಡುಹಿಡಿಯಲು ಪ್ರಯೋಗಗಳು ನಡೆಯುತ್ತಲೇ ಇವೆ.

ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಪ್ರಸ್ತುತ ಕೋವಿಡ್‌ಗೆ ಸೂಕ್ತ ಹಾಗೂ ಪರಿಣಾಮಕಾರಿ ಯಾದ ಲಸಿಕೆ ಕಂಡುಹಿಡಿಯುವ ತಯಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ವಿಶ್ವದಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭ ಗೊಳ್ಳಲಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಿದ್ಧಗೊಂಡಿರುವ ಈ ಲಸಿಕಾ ಸಂಗ್ರಹ ಕೊಠಡಿ(ವಾಕ್ ಇನ್ ಕೂಲರ್) ಯಲ್ಲಿ ಸುಮಾರು 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಸಿಡುವ ಸಾಮರ್ಥ್ಯ ವಿದ್ದು, ಇದು ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ.

ವಿಶ್ವದಾದ್ಯಂತ 248ಕ್ಕೂ ಅಧಿಕ ಲಸಿಕೆ ತಯಾರಿಕಾ ಕಂಪೆನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದು, ಇವುಗಳಲ್ಲಿ 197 ಲಸಿಕೆಗಳು ಪ್ರೀ ಕ್ಲಿನಿಕಲ್, 23 ಲಸಿಕೆಗಳು ಪೇಸ್ 1, 16 ಲಸಿಕೆಗಳು ಫೇಸ್ 1/2, 2 ಲಸಿಕೆಗಳು ಫೇಸ್ 2, 10 ಲಸಿಕೆಗಳು ಫೇಸ್ 3ರಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಇದುವರೆಗೆ ಯಾವುದೇ ಲಸಿಕೆಗೂ ಅಂತಿಮ ಅನುಮತಿ ದೊರೆತಿಲ್ಲ. ಆದರೆ ಶೀಘ್ರದಲ್ಲಿ ಅನುಮತಿ ದೊರೆಯುವ ನಿರೀಕ್ಷೆ ಹೊಂದಲಾಗಿದೆ.

ಕೇಂದ್ರ ಸರಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೊಂದಣಿ ಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರು, ಲ್ಯಾಬ್ ಟೆಕ್ನೀಷಿಯನ್ ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ಡೇಟಾಬೇಸ್‌ನ್ನು ಶೀಘ್ರದಲ್ಲಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಈಗಾಗಲೇ ಸೂಚನೆ ನೀಡಿದ್ದಾರೆ.

ಕೋವಿಡ್ ಲಸಿಕೆ ತಯಾರಿಕಾ ಘಟಕದಿಂದ ಆರಂಭಗೊಂಡು, ಸಂಚಾರ ವ್ಯವಸ್ಥೆ, ಲಸಿಕಾ ಸಂಗ್ರಹ ಕೊಠಡಿಯಲ್ಲಿ ಶೇಖರಣೆ ಮತ್ತು ಲಸಿಕೆ ವಿತರಣಾ ಸ್ಥಳಕ್ಕೆ ತಲುಪುವವರೆಗೆ ಲಸಿಕೆಗೆ ಅಗತ್ಯವಿರುವ 2ರಿಂದ 8 ಡಿಗ್ರಿವರೆಗಿನ ತಾಪಮಾನ ಕಾಪಾಡುವ ಅಗತ್ಯವಿದ್ದು, ಯಾವುದೇ ಸಂದರ್ಭದಲ್ಲಿ ಲಸಿಕೆಯ ತಾಪಮಾನ ವ್ಯತ್ಯಯವಾಗದಂತೆ ನಿಗಾ ವಹಿಸಲು ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 77 ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಲಸಿಕಾ ಸಂಗ್ರಹ ಕೊಠಡಿ (ವಾಕ್ ಇನ್ ಕೂಲರ್) ಯಲ್ಲಿ ಸುಮಾರು 2.28 ಕೋಟಿ ಡೋಸ್ ಲಸಿಕೆಯನ್ನು ಸಂಗ್ರಸಿಡುವ ಸಾಮರ್ಥ್ಯವಿದೆ. ಲಸಿಕೆ ಸಾಗಾಟಕ್ಕೆ 1324 ವಾಹನಗಳು, 9370 ಐಸ್‌ಪ್ಯಾಕ್‌ಗಳ ವ್ಯವಸ್ಥೆ ಮಾಡಲಾಗಿದ್ದು. ಲಸಿಕೆ ನೀಡಲು ನುರಿತ ಸಿಬ್ಬಂದಿಯನ್ನೂ ಸಹ ಗುರುತಿಸಲಾಗಿದೆ.

-ಡಾ. ಸುಧೀರ್‌ಚಂದ್ರ ಸೂಡಾ, ಡಿಎಚ್‌ಓ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News