ಬಿಜೆಪಿಯ ಲವ್ ಜಿಹಾದ್ ಹೇಳಿಕೆ ಹಾಸ್ಯಾಸ್ಪದ : ಪಿಎಫ್‌ಐ

Update: 2020-11-06 09:21 GMT

ಮಂಗಳೂರು, ನ. 6: ದೇಶದಲ್ಲಿ ಲವ್ ಜಿಹಾದ್ ಅಸ್ತಿತ್ವದಲ್ಲಿಯೇ ಇಲ್ಲವೆಂದು ಪೊಲೀಸರು, ತನಿಖಾ ಏಜೆನ್ಸಿಗಳು, ಕೇಂದ್ರ ಸರಕಾರ ಹೇಳಿದ್ದರೂ ರಾಜ್ಯ ಸರಕಾರದ ಕೆಲವರು ಲವ್ ಜಿಹಾದ್ ಕುರಿತು ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.

ಲವ್ ಜಿಹಾದ್ ಬಗ್ಗೆ ತನಿಖೆ ನಡೆಸಿರುವ ಕೇರಳ ಹಾಗೂ ಕರ್ನಾಟಕದ ಪೊಲೀಸರು ಇಂತಹ ಆರೋಪ ನಿರಾಧಾರ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರದ ಬಿಜೆಪಿ ಸರಕಾರವೂ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ ಎಂಬ ಲಿಖಿತ ಉತ್ತರ ವನ್ನು ಸಂಸತ್ತಿಗೆ ನೀಡಿತ್ತು. ಹಾಗಿದ್ದರೂ ರಾಜ್ಯದ ಬಿಜೆಪಿ ನಾಯಕರು ಕಪೋಲ ಕಲ್ಪಿತ ಲವ್ ಜಿಹಾದ್‌ಗೆ ಜೀವ ತುಂಬಿ ವಿಭಜನಕಾರಿ ಅಜೆಂಡಾ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾಸಿರ್ ಹಸನ್ ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

ಅಸಂವಿಧಾನಿಕ ಮತಾಂತರ ನಿಷೇಧ ಕಾಯ್ದೆ ತರುವ ಕುರಿತು ರಾಜ್ಯದ ಮುಖ್ಯಮಂತ್ರಿ ಮತ್ತು ಇತರ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ವಾಸ್ತವದಲ್ಲಿ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನ ನಾಗರಿಕೆ ನೀಡಿರುವ ಧಾರ್ಮಿಕ ಸ್ವಾತಂತ್ರದ ಮೇಲಿನ ಆಕ್ರಮಣ, ಇಲ್ಲದ ಲವ್ ಜಿಹಾದ್ ಕುರಿತು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮಂದಿರ ನಿರ್ಮಾಣ, ಗೋಹತ್ಯೆ, ಘರ್ ವಾಪ್ಸಿಯಂತೆ ಲವ್ ಜಿಹಾದ್ ಕೂಡಾ ಬಿಜೆಪಿಯ ಭಾವನಾತ್ಮಕ ರಾಜಕೀಯದ ಅಸ್ತ್ರವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News