ರಾಜ್ಯದಲ್ಲಿ ಪಟಾಕಿ ನಿಷೇಧ, ಶೀಘ್ರದಲ್ಲಿಯೇ ಅಧಿಕೃತ ಆದೇಶ: ಸಿಎಂ ಯಡಿಯೂರಪ್ಪ

Update: 2020-11-06 12:28 GMT

ಬೆಂಗಳೂರು, ನ. 6: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೋನ ವೈರಸ್ ಸೋಂಕಿತರ ಆರೋಗ್ಯದ ದೃಷ್ಟಿಯಿಂದ ತಜ್ಞರ ಸಲಹೆಯನ್ನು ಆಧರಿಸಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್ ಕಾರಣಕ್ಕೆ ಈಗಾಗಲೇ ರಾಜಸ್ಥಾನ ಸಹಿತ ಕೆಲ ರಾಜ್ಯಗಳು ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿವೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪಟಾಕಿ ನಿಷೇಧಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದರು.

ಐಸೋಲೇಷನ್‍ನಲ್ಲಿರುವ ಕೊರೋನ ಸೋಂಕಿತರಿಗೆ ಪಟಾಕಿ ಹೊಗೆಯಿಂದ ಹಾಗೂ ಅದರಿಂದ ಉಂಟಾಗುವ ಮಾಲಿನ್ಯದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಹೀಗಾಗಿ ಪಟಾಕಿ ನಿಷೇಧಕ್ಕೆ ತಜ್ಞ ವೈದ್ಯರು ಸಲಹೆ ನೀಡಿದ್ದು, ಅದನ್ನು ಆಧರಿಸಿ ರಾಜ್ಯದಲ್ಲಿ ಪಟಾಕಿ ನಿಷೇಧಕ್ಕೆ ಮುಂದಾಗಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಇದೇ ವೇಳೆ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News