ಸೋಮವಾರದಿಂದ ಹೆದ್ದಾರಿ ದುರಸ್ತಿ ಕಾಮಗಾರಿ ಆರಂಭಿಸುವ ಭರವಸೆ

Update: 2020-11-06 10:39 GMT

ಬಂಟ್ವಾಳ, ನ.6: ತೀವ್ರ ಹದಗೆಟ್ಟಿರುವ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹೊಂಡ ಮುಚ್ಚುವ ಕಾಮಗಾರಿಯನ್ನು ಸೋಮವಾರದಿಂದಲೇ ಆರಂಭಿಸುತ್ತೇವೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಎಸ್.ಡಿ.ಪಿ.ಐ. ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ತಾತ್ಕಾಲಿವಾಗಿ ಕೈಬಿಟ್ಟಿದೆ. 

ಶುಕ್ರವಾರ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪಕ್ಷದ ಮುಖಂಡರು ಬಂಟ್ವಾಳ ನಗರ ಠಾಣಾ ಪೊಲೀಸರ ಮಧ್ಯಸ್ತಿಕೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಪರವಾಗಿ ಆಗಮಿಸಿದ್ದ ಇಂಜಿನಿಯರುಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡರು. 

ಬಳಿಕ ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಮುಚ್ಚುವಂತೆ ಆಗ್ರಹಿಸಿ ನ.5ರಂದು ಹೆದ್ದಾರಿ ತಡೆ ಚಳವಳಿ ನಡೆಸಲು ಎಸ್.ಡಿ.ಪಿ.ಐ. ತೀರ್ಮಾನಿಸಿತ್ತು. ಆದರೆ ಇದಕ್ಕೆ ಮಧ್ಯ ಪ್ರವೇಶಿಸಿರುವ ಪೊಲೀಸರು, ಹೆದ್ದಾರಿ ತಡೆ ನಡೆಸುವುದರಿಂದ ಸಮಸ್ಯೆ ಉಂಟಾಗಲಿದ್ದು, ಹೆದ್ದಾರಿ ದುರಸ್ತಿ ನಡೆಸುವ ಬಗ್ಗೆ ಚರ್ಚಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದ್ದರು.

ಪೊಲೀಸರು ಮಾಡಿದ ಮನವಿಗೆ ಸ್ಪಂದಿಸಿ ನ.5ರಂದು ನಡೆಸಲು ಉದ್ದೇಶಿಸಿದ್ದ ಹೆದ್ದಾರಿ ತಡೆ ಪ್ರತಿಭಟನೆಯನ್ನು ಆ ದಿನ ಕೈ ಬಿಡಲಾಗಿತ್ತು. ಪೊಲೀಸರ ಭರವಸೆಯಂತೆ ಇಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು ಸೋಮವಾರದಿಂದ ಹೆದ್ದಾರಿಯ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ತಡೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದರು. 

ಸೋಮವಾರ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಆರಂಭಿಸದಿದ್ದರೆ ಕಲ್ಲಡ್ಕದಿಂದ ಪಾಣೆಮಂಗಳೂರುವರೆಗೆ ಪಕ್ಷದಿಂದ ಜಾಥ ನಡೆಸಿ ಪಾಣೆ ಮಂಗಳೂರು ಮಾಂಡೋವಿ ಕಾರು ಶೋರೂಂ ಬಳಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಸಹಾಯಕ ಇಂಜಿನಿಯರ್ ಅನಿರುದ್ದ್, ಸೈಟ್ ಇಂಜನಿಯರ್ ನಾಸಿರ್ ಬಂಟ್ವಾಳ ನಗರ ಠಾಣೆ ಎಸ್.ಐ. ಅವಿನಾಶ್ ಉಪಸ್ಥಿತಿಯಲ್ಲಿ ಮಾತನಾಡಿದರು. 

ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಖಲಂದರ್ ಪರ್ತಿಪಾಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಪ್ರಮುಖರಾದ ಮಾಲಿಕ್ ಕೊಳಕೆ, ಸತ್ತಾರ್ ಕಲ್ಲಡ್ಕ, ಇಕ್ಬಾಲ್ ನಂದರಬೆಟ್ಟು, ಉಬೈದ್ ಬಂಟ್ವಾಳ, ರವೂಫ್ ಕಲಾಯಿ, ಫೈಝಲ್ ಮಂಚಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News