ನ.11ರಿಂದ ಜಿಕೆವಿಕೆಯಲ್ಲಿ ಕೃಷಿ ಮೇಳ: ಆನ್ ಲೈನ್ ಮೂಲಕ ಚಾಲನೆ

Update: 2020-11-07 11:23 GMT

ಬೆಂಗಳೂರು, ನ.7: ಕೊರೋನ ಸೋಂಕು ಹಿನ್ನೆಲೆ ಈ ಬಾರಿ ಜಿಕೆವಿಕೆ ಬೆಂಗಳೂರು ಕೃಷಿವಿದ್ಯಾಲಯ ನ.11 ರಿಂದ 13ರವರೆಗೆ ಏರ್ಪಡಿಸುವ ಕೃಷಿಮೇಳ ಆನ್‍ಲೈನ್ ಮುಖಾಂತರವೇ ನಡೆಯಲಿದ್ದು, ನಿಗದಿತ ಸಂಖ್ಯೆಯಲ್ಲಿ ಮಾತ್ರ ರೈತರಿಗೆ ಆಹ್ವಾನ ನೀಡಲಾಗಿದೆ.

ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷವಾಗಿ ಕೃಷಿ ವಿಶ್ವವಿದ್ಯಾನಿಲಯವು ಮೂರು ಹೊಸ ತಳಿ ಹಾಗೂ 17 ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ಕುಳಿತಲ್ಲೇ ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ನೇರ ಪರಿಹಾರ ನೀಡಲಾಗುತ್ತದೆ. ಕೃಷಿಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯದ ಸುಮಾರು 25 ಮಳಿಗೆಗಳು ಮಾತ್ರ ಇರಲಿವೆ.

ಪ್ರತ್ಯೇಕ ದಿನಗಳಂದು ಪ್ರತ್ಯೇಕ ಜಿಲ್ಲೆಗಳ ರೈತರಿಗೆ ಆಹ್ವಾನಿಸಲಾಗುತ್ತದೆ. ಕೃಷಿ ಮೇಳಕ್ಕೆ 18 ವರ್ಷ ಮೇಲ್ಪಟ್ಟು ಹಾಗೂ 60 ವರ್ಷ ವಯೋಮಾನದ ಮಿತಿಯೊಳಗೆ ಇರುವವರಿಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ. ಅಲ್ಲದೇ ಕೃಷಿಮೇಳದ ಸಂಪೂರ್ಣ ನೇರ ಪ್ರಸಾರವನ್ನು ಯೂಟ್ಯೂಬ್, ಫೇಸ್‍ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್‍ನಲ್ಲಿ ನೀಡಲಾಗುತ್ತದೆ.

ಖಾಸಗಿ ಕೃಷಿ ಪರಿಕರ ಮಳಿಗೆಗಳು ಹಾಗೂ ಮಾರಾಟಗಳು ಇರುವುದಿಲ್ಲ. ಪ್ರತಿ ವರ್ಷದಂತೆ ಸಾಧನೆ ಮಾಡಿದ ರೈತರಿಗೆ ನೇಗಿಲಯೋಗಿ ಪುರಸ್ಕಾರ ನೀಡಲಾಗುತ್ತದೆ. ನೂತನ ತಳಿಗಳಾದ ನೆಲಗಡಲೆಯಲ್ಲಿ ಜಿಕೆವಿಕೆ 27, ಅಲಸಂದೆಯಲ್ಲಿ ಕೆಸಿ 8 ಮತ್ತು ಮೇವಿನ ಬೆಳೆಯಲ್ಲಿ ಅಲಸಂದೆ ಎಂಎಫ್‍ಸಿ 09-3 ಎಂಬ ಮೂರು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News