ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಲ್ಲ: ರಮಾನಾಥ ರೈ

Update: 2020-11-07 15:38 GMT

ಬಂಟ್ವಾಳ, ನ.7: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಲ್ಲ. ಯಾರಾದರೂ ನಮ್ಮ ಅಭ್ಯರ್ಥಿಗಳನ್ನು ಸ್ವಯಂ ಆಗಿ ಬೆಂಬಲಿಸಿದರೆ ಅದು ಅವರ ಇಷ್ಟ. ಅದಕ್ಕೆ ನಾವು ಬೇಡ ಎನ್ನಲು ಆಗುವುದಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕ ಮತ್ತು ಸಚಿವನಾಗಿದ್ದ ಸಂದರ್ಭದ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೀರು, ರಸ್ತೆ ಸಹಿತ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದ ಫಲವಾಗಿ ಪುರಸಭೆಯ ಚುನಾವಣೆಯಲ್ಲಿ ಇತರ ಪಕ್ಷಗಳಿಗಿಂತ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಹೆಚ್ಚು ಸ್ಥಾನಗಳನ್ನು ಹೊಂದಿದ್ದ ನಮ್ಮ‌ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.

ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಎಂಬ ಆರೋಪಕ್ಕೆ ಹುರುಲಿಲ್ಲ. ಒಂದು ಸ್ಥಾನ ಅವರಿಗೆ, ಇನ್ನೊಂದು ಸ್ಥಾನ ನಮಗೆ ಹಂಚಿದರೆ ಅದು ಹೊಂದಾಣಿಕೆ. ಕಾಂಗ್ರೆಸ್ ಎರಡೂ ಸ್ಥಾನಕ್ಕೆ ಸ್ಪರ್ಧಿಸಿ ಎರಡೂ ಸ್ಥಾನವನ್ನು ಗೆದ್ದಿದೆ. ಇದರಲ್ಲಿ ಹೊಂದಾಣಿಕೆಯ ಮಾತೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಸಿದ್ಧಾಂತ ಇಲ್ಲ. ಕಾಂಗ್ರೆಸ್ ನಲ್ಲಿ ಇರುವುದು ಜಾತ್ಯಾತೀತ ಸಿದ್ಧಾಂತ ಮಾತ್ರ. ಅಧ್ಯಕ್ಷ ಸ್ಥಾ‌ನಕ್ಕೆ ಹಿರಿತನದ ಅರ್ಹತೆಯಲ್ಲಿ ಇಬ್ಬರು ಸದಸ್ಯರು ನಮ್ಮಲ್ಲಿ ಇದ್ದರು. ಅವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿದ್ದೇವೆ. ಉಪಾಧ್ಯಕ್ಷೆ ಸ್ಥಾ‌ನ ಹಿಂದುಳಿದ ವರ್ಗ (ಬಿ)ಗೆ ಮೀಸಲಾಗಿದ್ದರಿಂದ ನಮ್ಮಲ್ಲಿ ಒಬ್ಬರೇ ಅರ್ಹ ಅಭ್ಯರ್ಥಿ ಇದ್ದು ಅವರಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ ಎಂಬುದನ್ನು ಮುಂದಿಟ್ಟು ನಮ್ಮ‌ ಮೇಲೆ ತಪ್ಪು ಹುಡುಕುವ ಕೆಲಸ ಬೇಡ‌ ಎಂದು ರಮಾನಾಥ ರೈ ಹೇಳಿದರು.

ಇದೇ ವೇಳೆ ಅಧ್ಯಕ್ಷ, ಉಪಾಧ್ಯಕ್ಷೆಗೆ ಅಭಿನಂದನೆಗಳನ್ನು ಸಲ್ಲಿಸಿದ ರಮಾನಾಥ ರೈ, ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಜನಮನ್ನಣೆ ಗಳಿಸಲಿ ಎಂದು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News