ಉಡುಪಿ ಜಿಲ್ಲೆಯಲ್ಲಿ ಇಂದು 18 ಕೋವಿಡ್ ಪಾಸಿಟಿವ್, ಒಂದು ಸಾವು

Update: 2020-11-07 14:28 GMT

ಉಡುಪಿ, ನ. 7: ಜಿಲ್ಲೆಯಲ್ಲಿ ಶನಿವಾರ ಕೇವಲ 18 ಮಂದಿಯಲ್ಲಿ ಮಾತ್ರ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಜೂನ್ ಬಳಿಕ ಒಂದು ದಿನದಲ್ಲಿ ಪತ್ತೆಯಾದ ಅತಿ ಕಡಿಮೆ ಸೋಂಕಿತರ ಸಂಖ್ಯೆ ಇದಾಗಿದೆ. ಅಲ್ಲದೇ ದಿನದಲ್ಲಿ ಒಟ್ಟು 66 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ 12 ಮಂದಿ ಪುರುಷರು ಹಾಗೂ ಆರು ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನ 7, ಕುಂದಾಪುರ ತಾಲೂಕಿನ 5 ಹಾಗೂ ಕಾರ್ಕಳ ತಾಲೂಕಿನ 6 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಡಾ.ಸೂಡ ಹೇಳಿದರು.

ದಿನದಲ್ಲಿ ಪಾಸಿಟಿವ್ ಬಂದ 18 ಮಂದಿಯಲ್ಲಿ ಇಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ, ಉಳಿದ 16 ಮಂದಿ ತಮ್ಮ ತಮ್ಮ ಮನೆಗಳಲ್ಲೇ ಹೋಮ್ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

66 ಮಂದಿ ಗುಣಮುಖ: ಶುಕ್ರವಾರ ಜಿಲ್ಲೆಯಲ್ಲಿ 66 ಮಂದಿ ಸೋಂಕಿ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮೂಲಕ ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದವರ ಒಟ್ಟು ಸಂಖ್ಯೆ ಸದ್ಯ 21,598 ಆಗಿದೆ. ಜಿಲ್ಲೆಯಲ್ಲಿ ಸದ್ಯ 377 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದು, ಆಸ್ಪತ್ರೆಗಳಲ್ಲಿ ಮತ್ತು ಮನೆಗಳ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದರು.

1912 ನೆಗೆಟಿವ್: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 1935 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ 1912 ಮಂದಿ ನೆಗೆಟಿವ್ ಬಂದಿದ್ದು, 23 (ಐಸಿಎಂಆರ್ ವರದಿ)ಮಂದಿ ಮಾತ್ರ ಪಾಸಿಟಿವ್ ಬಂದಿದ್ದಾರೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ 22,161 ಆಗಿದೆ.

ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಒಟ್ಟು 1,96,133 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1,73,972 ಮಂದಿ ನೆಗೆಟಿವ್ ಹಾಗೂ 22,161 ಮಂದಿ ಪಾಸಿಟಿವ್ ಬಂದಿದ್ದಾರೆ. ಈಗಾಗಲೇ 21,598 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಟ್ಟು 187 ಮಂದಿ ಮೃತಪಟ್ಟಿದ್ದಾರೆ.

ವೃದ್ಧೆ ಸಾವು: ಕೋವಿಡ್ ಸೋಂಕಿನಿಂದ ಶುಕ್ರವಾರ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನ 72 ವರ್ಷ ಪ್ರಾಯದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಧುಮೇಹ, ಕಿಡ್ನಿ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತಿದ್ದ ಇವರು ಆಸ್ಪತ್ರೆಗೆ ದಾಖಲಾಗಿ್ದು ಕೋವಿಡ್‌ಗೆ ಪಾಸಿಟಿವ್ ಬಂದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 187ಕ್ಕೇರಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News