ಬುಡಕಟ್ಟು ವಿಕಾಸ ಯೋಜನೆ ಅನುಷ್ಠಾನಗೊಳಿಸಿ : ಡಿಸಿ ರಾಜೇಂದ್ರ

Update: 2020-11-07 17:09 GMT

ಮಂಗಳೂರು, ನ.7: ಕಿರುಅರಣ್ಯ ಉತ್ಪನ್ನಗಳ ಮೌಲ್ಯವರ್ಧಿತ ಮಾರುಕಟ್ಟೆ ಸೃಷ್ಟಿಸುವುದರ ಮೂಲಕ ಬುಡಕಟ್ಟು ಜನರನ್ನು ಆರ್ಥಿಕ ಸದೃಢರನ್ನಾಗಿಸುವ ‘ವನಧನ ವಿಕಾಸ’ ಯೋಜನೆಯನ್ನು ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.

ನಗರದ ದ.ಕ. ಜಿಪಂನಲ್ಲಿ ವೀಡಿಯೋ ಕಾನ್ಫೆರೆನ್ಸ್ ಮೂಲಕ ಶನಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಗೆ ಎರಡು ವನ-ಧನ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲು ಮಂಜೂರಾತಿ ದೊರೆತಿದೆ. ಕಿರು ಅರಣ್ಯ ಉತ್ಪನ್ನಗಳು ಅತಿ ಹೆಚ್ಚಾಗಿ ದೊರೆ ಯುವ ತಾಲೂಕು ಕೇಂದ್ರದಲ್ಲಿ ಇವುಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು. ಕಿರುಅರಣ್ಯ ಉತ್ಪನ್ನಗಳಾದ ರಾಂಪತ್ರೆ, ಸೀಗೆಕಾಯಿ, ಕಾಡುಜೇನು, ಮೆಣಸು, ಪುನರ್ಪುಳಿ, ದಾಲ್ಚೀನ್ನಿ, ಕರಿಮೆಣಸು, ಇತ್ಯಾದಿಗಳನ್ನು ಸಂಗ್ರಹಿಸಬೇಕು. ಸುವ್ಯವಸ್ಥಿತ ಮಾರುಕಟ್ಟೆ ಸ್ಥಾಪಿಸಿ, ಮಾರಾಟ ಮಾಡಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಗಳಿಗೆ ನಿರ್ದೇಶನ ನೀಡಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡವರ ಅಭಿವೃದ್ಧಿ ಕಾರ್ಯಕ್ರಮಗಳಡಿ ಫಲಾನುಭವಿ ಆಧಾರಿತ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಸಹಾಯಧನ ಹಾಗೂ ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಸರಕು ಸಾಗಾಣಿಕೆ ವಾಹನ ಮತ್ತು ಹಂದಿ ಸಾಕಾಣಿಕೆಗಾಗಿ ಅರ್ಜಿ ಸಲ್ಲಿಸಿದ 64 ಫಲಾನುಭವಿಗಳ ಆಯ್ಕೆಯು ಲಾಟರಿ ಎತ್ತುವ ಮೂಲಕ ಮಾಡಲಾಯಿತು. ಆಯ್ಕೆಯಾದ ಫಲಾನುಭವಿಗಳಿಗೆ ಇಲಾಖೆಯಿಂದ ಶೇ.50ರಿಂದ ಶೇ.90ರವರೆಗೆ ಸಹಾಯಧನ ನೀಡಲಾಗುವುದು ಎಂದರು.

ಆಯ್ಕೆ ಪ್ರಕ್ರಿಯೆಯಲ್ಲಿ ಐಎಎಸ್ ಪ್ರೊಬೆಷನರ್, ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಯ ಉಪ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ-ನಿರ್ದೇಶಕರು, ಜಿಲ್ಲಾ ಕೃಷಿ ಮಾರುಕಟ್ಟೆ ಅಧಿಕಾರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಬಂಟ್ವಾಳ ಮತ್ತು ಪುತ್ತೂರಿನ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರು, ಎನ್‌ಆರ್‌ಎಲ್‌ಎಂ ಸಂಯೋಜಕರು ಮತ್ತು ಯೋಜನಾ ಸಮನ್ವಯಾಧಿಕಾರಿ, ಐಟಿಡಿಪಿ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಇಲಾಖೆಯು ಪರಿಶಿಷ್ಟ ವರ್ಗಗದವರಿಗೆ ಯಾವುದೇ ತೊಂದರೆ ನೀಡಬಾರದು. ಅವರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು.
- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News