ದ.ಕ. ಜಿಲ್ಲೆಯ 73 ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ: ಸಚಿವ ಕೋಟ

Update: 2020-11-08 10:13 GMT

ಪುತ್ತೂರು, ನ.8: ಕೋವಿಡ್ ಬಾಧಿತರಿಗೆ ದ.ಕ. ಜಿಲ್ಲೆಯ ಎಲ್ಲ 73 ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆಯ ವ್ಯವಸ್ಥೆಯನ್ನು ಸರಕಾರದ ವತಿಯಿಂದ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಟೌನ್ ಬ್ಯಾಂಕ್ ಹಾಲ್‌ನಲ್ಲಿ ರವಿವಾರ ಆಯೋಜಿಸಿದ್ದ ಪುತ್ತೂರು ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಕೆ. ಜೀವಂಧರ್ ಜೈನ್ ಹಾಗೂ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿಯವರನ್ನು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪುತ್ತೂರು ನಗರಸಭೆಯಲ್ಲಿ ಅಧಿಕಾರಕ್ಕೆ ಬಂದಿರುವ ತಂಡವು ಮುಂದಿನ 50 ವರ್ಷಗಳ ದೂರದೃಷ್ಟಿಯನ್ನಿಟುಕೊಂಡು ಅಭಿವೃದ್ಧಿ ಯೋಜನೆಯನ್ನು ರೂಪುಗೊಳಿಸಬೇಕು. ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತವನ್ನು ನೀಡಬೇಕು. ಬಿಜೆಪಿಯ ವಿವಿಧ ಮೋರ್ಚಾಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳು ಶೇ.100ರಷ್ಟು ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಹಾಗೂ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅವರನ್ನು ಸಚಿವರು ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್, ಹಿಂದುಳಿದ ವರ್ಗಗಳ ಮೋರ್ಚಾ ಇಂದು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗೌರವಿಸಿ ನಮ್ಮ ಜವಾಬ್ದಾರಿಯನ್ನು ನೆನಪಿಸಿದೆ ಎಂದರು. ಉಪಾಧ್ಯಕ್ಷೆ ವಿದ್ಯಾಗೌರಿ ಮಾತನಾಡಿ, ಪಕ್ಷದ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ, ಬಿಜೆಪಿ ಮಂಗಳೂರು ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್, ಪುತ್ತೂರು ನಗರ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಶಿವರಾಮ ಸಪಲ್ಯ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಪೂಜಾರಿ ಉಪಸ್ಥಿತರಿದ್ದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ಜೋಗಿ ವಂದಿಸಿದರು. ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News