ಬಿಹಾರದಲ್ಲಿ ಮಹಾಘಟಬಂಧನ್ ಗೆಲ್ಲುವ ನಿರೀಕ್ಷೆ: ಸಿದ್ದರಾಮಯ್ಯ

Update: 2020-11-08 12:40 GMT

ಬೆಂಗಳೂರು, ನ. 8: ಬಿಹಾರದಲ್ಲಿ ನಡೆದಿರುವ ಚುನಾವಣೆಯಲ್ಲಿ ಮಹಾಘಟಬಂದನ್ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ನನಗೂ ಹಾಗೇ ಅನ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದ ತಮ್ಮ ನಿವಾಸ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಪ್ರಚಾರ ನಡೆಸಿದ ಕಡೆಗಳಲ್ಲಿ ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದರು. ಅಲ್ಲದೆ, ಎಕ್ಸಿಟ್ ಪೋಲ್ ಸಹ ಸತ್ಯವನ್ನೇ ಹೇಳಿದ್ದು, ಅದೇ ನಿಜವಾಗಲಿದೆ. ನಿತೀಶ್ ಹೋದ ಕಡೆ ಜನ ಸೇರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ ಎಂದಿರುವ ಸಿದ್ದರಾಮಯ್ಯ, ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೋಳು ತಟ್ಟಿ ಸವಾಲು ಹಾಕಿದ್ದು ಸರಿಯಲ್ಲ: ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಬಿಜೆಪಿಗೆ ತೋಳು ತಟ್ಟಿ ಸವಾಲು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ತಮ್ಮ ಪಕ್ಷದ ಶಾಸಕನ ವರ್ತನೆಯನ್ನು ಖಂಡಿಸಿದರು. ಶಾಸಕರ ಕೆಲಸ ಜನಸೇವೆ, ಕುಸ್ತಿಯಲ್ಲ. ಭೀಮಾನಾಯ್ಕ್ ತೋಳು ತಟ್ಟಿದ್ದರೆ ಅದು ತಪ್ಪು. ನಮ್ಮ ಶಾಸಕ ಅಂತ ನಾವು ಸಮರ್ಥನೆ ಮಾಡಿಕೊಳ್ಳಲ್ಲ. ಭೀಮಾನಾಯ್ಕ್ ಹಾಗೆ ಮಾಡಿರುವ ಬಗ್ಗೆ ಗೊತ್ತಿಲ್ಲ ಎಂದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ತುರುವಿಹಾಳ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಶನಿವಾರ ರಾತ್ರಿ ನನ್ನ ಭೇಟಿ ಮಾಡಿದ್ದರು. ಅವರನ್ನು ಸ್ವಾಗತ ಮಾಡಿದ್ದೇನೆ. ನಾಳೆ ಅಧಿಕೃತವಾಗಿ ಪಕ್ಷ ಸೇರ್ಪಡೆ ಆಗಲಿದ್ದಾರೆ. ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ, ಉಪಚುನಾವಣೆಗೆ ಸಿದ್ಧರಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News