ನಾಟೆಕಲ್‌ನಲ್ಲಿ ನೂತನ ಉಳ್ಳಾಲ ತಾಲೂಕು ಕಚೇರಿ ತೆರೆಯಲು ಸಿದ್ಧತೆ

Update: 2020-11-08 16:17 GMT

ಮಂಗಳೂರು, ನ.8: ಹೊಸತಾಗಿ ಅಸ್ತಿತ್ವಕ್ಕೆ ಬಂದಿರುವ ಉಳ್ಳಾಲ ತಾಲೂಕು ರಚನೆಯ ಪ್ರಕ್ರಿಯೆಯು ಅಧಿಕಾರಿಗಳ ಮಟ್ಟದಲ್ಲಿ ಪೂರ್ಣ ಗೊಂಡಿದ್ದು, ಸರಕಾರದ ಅಧಿಕೃತ ಆದೇಶಕ್ಕಷ್ಟೇ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸರಕಾರದ ಆದೇಶ ಬಂದೊಡನೆ ಅಧಿಕಾರಿಗಳು ತಾಲೂಕು ಅಸ್ತಿತ್ವದ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಇತ್ತ ಉಳ್ಳಾಲ ಮತ್ತು ಅತ್ತ ಸಜಿಪ ಭಾಗದ ಜನರ ಹಿತಾಸಕ್ತಿಯನ್ನು ಗಮನಿಸಿ ದೇರಳಕಟ್ಟೆಯನ್ನು ಉಳ್ಳಾಲ ತಾಲೂಕು ಕೇಂದ್ರವಾಗಿ ಪರಿಗಣಿಸುವ ಎಲ್ಲಾ ಸಾಧ್ಯತೆಗಳು ನಿಚ್ಛಳವಾಗಿದ್ದು, ಅದಕ್ಕೆ ಪೂರಕ ಎಂಬಂತೆ ದೇರಳಕಟ್ಟೆ ಸಮೀಪದ ನಾಟೆಕಲ್‌ನ ಸರಕಾರಿ ಕಟ್ಟಡದಲ್ಲಿ ನೂತನ ಕಚೇರಿಯನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಶಾಸಕ ಯು.ಟಿ.ಖಾದರ್ ಅನಿರೀಕ್ಷಿತವಾಗಿ ಉಳ್ಳಾಲ ತಾಲೂಕನ್ನು ಘೋಷಿಸಿದ್ದರು. ಅದು ಈ ಭಾಗದ ಜನರಿಗೇ ಅಚ್ಚರಿಯಾಗಿತ್ತು. ಯಾಕೆಂದರೆ ಹೊಸ ತಾಲೂಕು ರಚಿಸಬೇಕು ಎಂಬ ಯಾವೊಂದು ಒತ್ತಡ, ಹೋರಾಟ, ಕೂಗು ಈ ಭಾಗದ ಜನರಿಂದ ಕೇಳಿ ಬಂದಿರಲಿಲ್ಲ. ಆದರೆ ಅಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಾಸಕ ಖಾದರ್ ಸದ್ದಿಲ್ಲದೆ ಹೊಸ ತಾಲೂಕು ರಚನೆಗೆ ಸಂಬಂಧಿಸಿ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟು, ದಿಢೀರ್ ಆಗಿ ಘೋಷಿಸಿದ್ದರು. ಬಳಿಕ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದರೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಉಳ್ಳಾಲ ತಾಲೂಕು ಘೋಷಣೆಯನ್ನು ತಡೆ ಹಿಡಿಯಲಿಲ್ಲ. ಬದಲಾಗಿ ಸರಕಾರದ ಗಜೆಟ್ ನೋಟಿಫಿಕೇಶನ್ ಹೊರಬೀಳುವಂತೆ ಮಾಡಿದ್ದರು.

ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶೇ.90ರಷ್ಟು ಭಾಗವನ್ನು ಒಳಗೊಂಡಂತೆ ರಚಿಸಲಾಗುವ ‘ಉಳ್ಳಾಲ’ ತಾಲೂಕು ರಚನೆಯು ಜನಸಂಖ್ಯೆಯ ಹಿತದೃಷ್ಟಿಯಿಂದ ತುರ್ತಾಗಿ ಆಗಬೇಕಿದೆ. ಏಷ್ಯಾಖಂಡದಲ್ಲೇ ಪ್ರಥಮ ಎಂಬಂತೆ ಮೂರು ಡೀಮ್ಡ್ ವಿವಿಗಳು (ಯೆನೆಪೊಯ, ನಿಟ್ಟೆ, ಫಾದರ್ ಮುಲ್ಲರ್) ಇಲ್ಲಿವೆ. ಅಲ್ಲದೆ ಮಂಗಳೂರು ವಿವಿ, ಇನ್ಫೋಸಿಸ್, ತಾಂತ್ರಿಕ ಕಾಲೇಜುಗಳು, ಆಸ್ಪತ್ರೆಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿವೆ. ಹತ್ತಾರು ಮದುವೆ-ಸಮಾರಂಭಗಳ ಹಾಲ್, ಶಾಲಾ-ಕಾಲೇಜುಗಳಲ್ಲದೆ 100ಕ್ಕೂ ಅಧಿಕ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು ಇಲ್ಲಿ ತಲೆ ಎತ್ತಿವೆ.

ಅಷ್ಟೇ ಅಲ್ಲ ‘ಉಳ್ಳಾಲ’ ತಾಲೂಕು ವ್ಯಾಪ್ತಿಯಲ್ಲಿ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ತಲಪಾಡಿ, ಕಿನ್ಯ, ಮಂಜನಾಡಿ, ಮುನ್ನೂರು, ಅಂಬ್ಲಮೊಗರು, ಬೆಳ್ಮ, ಕೊಣಾಜೆ, ಹರೇಕಳ, ಪಾವೂರು, ಬೋಳಿಯಾರು ಹಾಗೂ ಬಂಟ್ವಾಳ ತಾಲೂಕಿನ ನರಿಂಗಾನ, ಬಾಳೆಪುಣಿ-ಕೈರಂಗಳ, ಕುರ್ನಾಡು,ಪಜೀರ್, ಇರಾ, ಸಜಿಪ ನಡು, ಸಜಿಪ ಪಡು ಗ್ರಾಮಗಳಿವೆ.

ಉಳ್ಳಾಲ ತಾಲೂಕು ಕೇಂದ್ರವನ್ನು ದೇರಳಕಟ್ಟೆಯಲ್ಲಿ ತೆರೆದರೆ ಉಳ್ಳಾಲ, ತಲಪಾಡಿ, ಸೋಮೇಶ್ವರ ಭಾಗದ ಜನರಿಗೆ ಎರಡೆರಡು ಬಸ್‌ಗಳ ಮೂಲಕ ದೇರಳಕಟ್ಟೆಗೆ ತೆರಳುವ ಸಮಸ್ಯೆಯನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಸಮಸ್ಯೆಯಾಗದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

ಮೂರು ಗ್ರಾಮಗಳಿಗೆ ಖೊಕ್ !

ಉಳ್ಳಾಲ ತಾಲೂಕು ಘೋಷಿಸಿದಾಗ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿಯ ಮೇರಮಜಲು, ತುಂಬೆ, ಪುದು ಗ್ರಾಮಗಳ ಜನರು ತಮ್ಮನ್ನು ಹೊಸ ತಾಲೂಕು ವ್ಯಾಪ್ತಿಯೊಳಗೆ ಸೇರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರಂತೆ ಗಜೆಟ್ ನೋಟಿಫಿಕೇಶನ್ ಸಂದರ್ಭ ಈ ಮೂರು ಗ್ರಾಮಗಳನ್ನು ಉಳ್ಳಾಲ ತಾಲೂಕಿನಿಂದ ಕೈ ಬಿಡಲಾಗಿದೆ. ಹಾಗಾಗಿ ಈ ಮೂರು ಗ್ರಾಮಗಳು ಬಂಟ್ವಾಳ ತಾಲೂಕಿನಲ್ಲೇ ಮುಂದುವರಿಯಲಿದೆ.

ನೂತನ ಉಳ್ಳಾಲ ತಾಲೂಕಿಗೆ ಸಜಿಪನಡು ಗ್ರಾಮದ ದೇರಾಜೆ ಕೊಳಿಕೆ, ಉಳ್ಳಾಲದ ನೇತ್ರಾವತಿ, ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ, ತಲಪಾಡಿ, ನರಿಂಗಾನ ಗ್ರಾಮದ ಕೆದುಂಬಾಡಿ, ಕುಕ್ಕಾಜೆಮ ಮಂಚಿ ಗಡಿ ಹೊಂದಿದೆ. ಹಾಗಾಗಿ ಇದರಿಂದಾಗಿ ಬಂಟ್ವಾಳ ತಾಲೂಕಿನಿಂದ ಕುರ್ನಾಡು, ಬಾಳೆಪುಣಿ, ಇರಾ, ನರಿಂಗಾನ, ಸಜಿಪನಡು ಗ್ರಾಮಗಳು ಕಳಚಿಕೊಳ್ಳಲಿದೆ.

ಮಂಗಳೂರು ನಾಲ್ಕು ಹೋಳು

ಮಂಗಳೂರು ತಾಲೂಕು ರಾಜ್ಯದಲ್ಲೇ ಅತೀ ದೊಡ್ಡ ತಾಲೂಕು (ವಿಸ್ತೀರ್ಣ 922 ಚ.ಕಿ.ಮೀ.) ಆಗಿತ್ತು. ಮಂಗಳೂರು, ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವೂ ಮಂಗಳೂರು ತಾಲೂಕಿನಲ್ಲೇ ಇದೆ. ಅದಲ್ಲದೆ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಮೂಡುಬಿದಿರೆ ಮತ್ತು ಸೋಮೇಶ್ವರ ಪುರಸಭೆ, ಮುಲ್ಕಿ ಮತ್ತು ಕೋಟೆಕಾರ್ ಪಟ್ಟಣ ಪಂಚಾಯತನ್ನೂ ಮಂಗಳೂರು ತಾಲೂಕು ಹೊಂದಿತ್ತು.

ಇದೀಗ ಮಂಗಳೂರು ತಾಲೂಕು ನಾಲ್ಕು ಹೋಳು ಆಗಿವೆ. ಅಂದರೆ ಮೂಲ ಮಂಗಳೂರು, ಮೂಡುಬಿದಿರೆ, ಮುಲ್ಕಿ, ಉಳ್ಳಾಲ ಹೀಗೆ ನಾಲ್ಕು ತಾಲೂಕುಗಳು ರೂಪುಗೊಳ್ಳಲಿದೆ. ಈ ಹಿಂದೆ ಮಂಗಳೂರು ತಾಲೂಕಿನಲ್ಲಿ 148 ಗ್ರಾಮಗಳಿತ್ತು. ಈಗಾಗಲೆ ಮೂಡುಬಿದಿರೆಯು ಹೊಸ ತಾಲೂಕು ಆಗಿವೆ. ಮುಲ್ಕಿ ಮತ್ತು ಉಳ್ಳಾಲ ಶೀಘ್ರ ಹೊಸ ತಾಲೂಕು ಆಗಲಿರುವುದರಿಂದ ಮಂಗಳೂರು ತಾಲೂಕಿನಲ್ಲಿ ಇನ್ನುಳಿರುವುದು ಕೇವಲ 76 ಗ್ರಾಮಗಳು ಮಾತ್ರ.

ಈ ಹಿಂದೆ ಮಂಗಳೂರು ತಾಲೂಕಿನಲ್ಲಿ 6 ಹೋಬಳಿಗಳು ಅಂದರೆ ಮಂಗಳೂರು ‘ಎ’ (14 ಗ್ರಾಮಗಳು), ಮಂಗಳೂರು ‘ಬಿ’ (22 ಗ್ರಾಮಗಳು), ಸುರತ್ಕಲ್ (28 ಗ್ರಾಮಗಳು), ಗುರುಪುರ (26 ಗ್ರಾಮಗಳು), ಮುಲ್ಕಿ (30 ಗ್ರಾಮಗಳು), ಮೂಡುಬಿದಿರೆ (28 ಗ್ರಾಮಗಳು) ಇತ್ತು. ಇದೀಗ ಮಂಗಳೂರು ‘ಎ’ಯ 14, ಮಂಗಳೂರು ‘ಬಿ’ಯ 8, ಸುರತ್ಕಲ್‌ನ 28, ಗುರುಪುರದ 26 ಗ್ರಾಮಗಳ ಸಹಿತ ಕೇವಲ 76 ಗ್ರಾಮಗಳು ಮಾತ್ರ ಮಂಗಳೂರು ತಾಲೂಕಿನಲ್ಲಿ ಉಳಿಯಲಿವೆ. 72 ಗ್ರಾಮಗಳು ಮೂರು ಹೊಸ ತಾಲೂಕುಗಳಲ್ಲಿ ಹಂಚಿ ಹೋಗಲಿವೆ.

ಹೊಸ ಹೋಬಳಿ ಅಸ್ತಿತ್ವಕ್ಕೆ

ಉಳ್ಳಾಲ ತಾಲೂಕಿನ ಸ್ಥಾಪನೆಯೊಂದಿಗೆ ಹೊಸ ಹೋಬಳಿ ರಚನೆಯೂ ಆಗಲಿದೆ. ಹೊಸ ತಾಲೂಕು ವ್ಯಾಪ್ತಿಯಲ್ಲಿ ತೊಕ್ಕೊಟ್ಟು, ದೇರಳಕಟ್ಟೆ, ಮುಡಿಪು ಹೀಗೆ ಮೂರು ಹೋಬಳಿ ರಚಿಸಬೇಕು ಎಂಬ ಬೇಡಿಕೆ ಸ್ಥಳೀಯರಿಂದ ವ್ಯಕ್ತವಾಗುತ್ತಿವೆ.

''ಉಳ್ಳಾಲ ತಾಲೂಕು ರಚನೆಗೆ ಸಂಬಂಧಿಸಿ ಸರಕಾರ ಈಗಾಗಲೆ ಗಜೆಟ್ ನೋಟಿಪಿಕೇಶನ್ ಹೊರಡಿಸಿದೆ. ಈಗಾಗಲೆ ನಾಟೆಕಲ್‌ನ ಸರಕಾರಿ ಕಟ್ಟಡದಲ್ಲಿ ಹೊಸ ತಾಲೂಕಿನ ಕಚೇರಿ ತೆರೆಯಲು ಸಿದ್ಧತೆ ನಡೆಸಲಾಗಿದೆ. ಸರಕಾರದ ಆದೇಶ ಹೊರಬಿದ್ದೊಡನೆ ಹೊಸ ತಾಲೂಕು ಅಸ್ತಿತ್ವಕ್ಕೆ ಬರಲಿದೆ. ಅಧಿಕಾರಿಗಳ ಮಟ್ಟದಲ್ಲಿ ನಡೆಯಬೇಕಿದ್ದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಲಾಗಿದೆ''.
ಗುರುಪ್ರಸಾದ್, ತಹಶೀಲ್ದಾರ್, ಮಂಗಳೂರು ತಾಲೂಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News