ಮಂಗಳೂರು : ಏಕಕಾಲದಲ್ಲಿ ಹಲವೆಡೆ ರಸ್ತೆ, ಒಳಚರಂಡಿ ಕಾಮಗಾರಿ ಭರಾಟೆ

Update: 2020-11-09 14:13 GMT

ಮಂಗಳೂರು, ನ. 9: ನಗರದ ಹಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಹಲವೆಡೆ ರಸ್ತೆ ಕಾಮಗಾರಿಗಳು ಏಕಕಾಲದಲ್ಲಿ ಚಾಲ್ತಿಯಲ್ಲಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಪರದಾಡುವ, ಕಿರಿಕಿರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ. ರಸ್ತೆ ಕಾಮಗಾರಿಯ ಜತೆಯಲ್ಲೇ ನೀರಿನ ಪೈಪ್ ಅಳವಡಿಕೆ, ಒಳಚರಂಡಿ ಕಾಮಗಾರಿಗಳನ್ನೂ ನಡೆಸಲಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ನಿಷೇದಿಸಲಾಗಿರುವುದರಿಂದ ಇತರ ರಸ್ತೆಗಳಲ್ಲಿ ಟ್ರಾಫಿಕ್ ಜಾವ್ ಕಿರಿಕಿರಿಯನ್ನು ಅನುಭವಿಸಬೇಕಾಗಿದೆ.

ಕ್ಲಾಕ್‌ಟವರ್‌ನಿಂದ ಆರಂಭಿಸಿ, ಹಂಪನಕಟ್ಟೆ, ರಥಬೀದಿ, ಬಂದರು, ಪಿವಿಎಸ್, ಬಂಟ್ಸ್‌ಹಾಸ್ಟೆಲ್, ಎಬಿ ಶೆಟ್ಟಿ ವೃತ್ತ ಮೊದಲಾದೆಡೆ ವಾಹನ ದಟ್ಟನೆಯಿಂದ ವಾಹನ ಸವಾರರು ಕೆಲ ನಿಮಿಷಗಳ ದಾರಿಯನ್ನು ಗಂಟೆಗಟ್ಟಲೆ ಕ್ರಮಿಸಬೇಕಾಯಿತು. ನಿನ್ನೆಯೂ ಇದೇ ರೀತಿಯ ವಾತಾವರಣ ವಿದ್ದರೂ ಇಂದು ಸೋಮವಾರದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದ ಕಾರಣ ತುರ್ತು ಕೆಲಸಗಳಿಗೆ ತೆರಳುವವರು ನಗರದಲ್ಲಿ ಪರದಾಡಬೇಕಾಯಿತು.

ಯಾವುದೇ ರೀತಿಯ ಮುಂದಾಲೋಚನೆಯಿಲ್ಲದೆ, ಅಕ್ಕಪಕ್ಕದ ಹಲವು ಪ್ರಮುಖ ರಸ್ತೆಗಳ ಕಾಮಗಾರಿಯನ್ನು ಏಕಕಾಲದಲ್ಲಿ ನಡೆಸುತ್ತಿರುವುದ ರಿಂದ ಹಂಪನಕಟ್ಟೆ, ರಥಬೀದಿ, ಪಿವಿಎಸ್, ಬಂಟ್ಸ್‌ಹಾಸ್ಟೆಲ್ ಮೊದಲಾದ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂಬ ಆಕ್ರೋಶ ಜನಸಾಮಾನ್ಯರಿಂದ ವ್ಯಕ್ತವಾಗಿದೆ.  ಸಾಮಾಜಿಕ ಜಾಲತಾಣಗಳಲ್ಲಿಯೂ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಗರದ ರಥಬೀದಿ, ಬಂದರು ಪ್ರದೇಶ ಸೇರಿದಂತೆ ಹಲವೆಡೆ ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಸಂಚಾರ ವ್ಯವಸ್ಥೆ ಬದಲಾಯಿ ಸಲಾಗಿದೆ. ಇದೇ ವೇಳೆ ಹಂಪನಕಟ್ಟೆ ಸಂಪರ್ಕ ರಸ್ತೆಗಳನ್ನು ಕೂಡ ಮಾರ್ಪಾಡು ಮಾಡಿರುವುದು ವಾಹನ ಸಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಸಕರಿಂದ ಸಭೆ

ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಪಾಡಿನಿಂದ ಆಗಿರುವ ಸಮಸ್ಯೆಗಳ ಕುರಿತಂತೆ ಶಾಸಕ ವೇದವ್ಯಾಸ ಕಾಮತ್ ಅವರು ಸೋಮವಾರ ಪಾಲಿಕೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಾಧ್ಯವಿರುವ ಎಲ್ಲಾ ಪರ್ಯಾಯ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News