ಮಕ್ಕಳ ಪಾಲನಾ ಕೇಂದ್ರದ ವಿವರ ಸಂಗ್ರಹಿಸಿ : ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ
ಮಂಗಳೂರು, ನ.9: ಬಾಲ್ಯದಲ್ಲಿ ಮಕ್ಕಳಿಗೆ ದೊರಕಬೇಕಾದ ಸಮರ್ಪಕ ಪಾಲನೆ ಪೋಷಣೆಗಳಿಂದ ವಂಚಿತರಾಗದಂತೆ ನೋಡಿಕೊಂಡು ಅವರಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯದಲ್ಲಿ ಸುಸಂಸ್ಕೃತ ಪ್ರಜೆಗಳಾಗಿ ರೂಪಿಸಬೇಕು. ಮಕ್ಕಳ ಪಾಲನಾ ಕೇಂದ್ರಗಳ ಸಮಗ್ರ ವಿವರವನ್ನು ಅಧಿಕಾರಿಗಳು ಸಂಗ್ರಹಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ಮಕ್ಕಳ ಪಾಲನಾ ಸಂಸ್ಥೆಗಳ ಜಿಲ್ಲಾ ತನಿಖಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಎಲ್ಲ ಮಕ್ಕಳ ಪಾಲನಾ ಕೇಂದ್ರಗಳನ್ನು ಬಾಲನ್ಯಾಯ ಕಾಯ್ದೆ ಅನ್ವಯ ನೋಂದಾಯಿಸಿಕೊಳ್ಳಬೇಕು. ಆಗಿಂದಾಗ್ಗೆ ಪಾಲನಾ ಕೇಂದ್ರಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುವಂತೆ ಆದೇಶಿಸಿದರು. ಮಕ್ಕಳ ರಕ್ಷಣೆ ಹಾಗೂ ಪೋಷಣೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕೆಂದು ಸೂಚಿಸಿದರು.
ನಿರಂತರವಾಗಿ ಯಾವುದೇ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು. ಇದರಿಂದ ಬಾಲ್ಯ ವಿವಾಹ, ಬಾಲಕಾರ್ಮಿಕರು, ಮಕ್ಕಳ ನಾಪತ್ತೆಯಂತಹ ಪ್ರಕರಣಗಳನ್ನು ತಡೆಯುವಲ್ಲಿ ಯಶಸ್ವಿ ಯಾಗಬಹುದು ಎಂದರು.
ಜಿಲ್ಲೆಯ ಬಾಲ ನಿಯಮ ಮಂಡಳಿಯಲ್ಲಿ 2008ರಿಂದ ಈವರಗೆ 413 ಪ್ರಕಟಣಗಳು ಬಾಕಿ ಇದ್ದು, 50 ಪ್ರಕರಣಗಳಲ್ಲಿ ದೋಷಾರೋಪಣ ಪತ್ರ ಸಲ್ಲಿಸಲು ಬಾಕಿ ಇದೆ. ಪ್ರಕರಣಗಳು ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸಿಸುವಂತೆ ಸೂಚಿಸಿದರು. 2010ರಿಂದ ಈವರೆಗೆ ದತ್ತು ಕೇಂದ್ರ ಗಳಲ್ಲಿ 182 ಮಕ್ಕಳು ದಾಖಲಾಗಿದ್ದು, ಅವರಲ್ಲಿ 21 ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. 125 ಮಕ್ಕಳನ್ನು ದತ್ತು ನೀಡಲಾಗಿದ್ದು, ದತ್ತು ಕೇಂದ್ರದಲ್ಲಿ ಅನಾರೋಗ್ಯದಲ್ಲಿ 12 ಮಕ್ಕಳು ಮರಣ ಹೊಂದಿದ್ದಾರೆ. 8 ಮಕ್ಕಳನ್ನು ಬೇರೆ ಸಂಸ್ಥೆಗೆ ವರ್ಗಾಯಿಸಲಾಗಿದೆ. 3 ಮಕ್ಕಳನ್ನು ಪೋಷಕತ್ವಕ್ಕೆ ನೀಡಲಾಗಿದೆ. 14 ಮಕ್ಕಳು ಪ್ರಸ್ತುತ ಸಂಸ್ಥೆಯಲ್ಲಿದ್ದು, ಆ ಮಕ್ಕಳನ್ನು ಆರೋಗ್ಯವಂತರಾಗಿ ಪಾಲನೆ ಪೋಷಣೆ ಮಾಡಬೇಕೆಂದು ಸಂಬಂಧಪಟ ಅಧಿಕಾರಿಗಳಿಗೆ ಸೂಚಿಸಿದರು.
ಎಚ್‌ಐವಿ ಸೋಂಕಿತ, ಬಾಧಿತ ಮಕ್ಕಳು ಹಾಗೂ ಇಂತಹ ಕಾಯಿಲೆಯಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆಯಾಗುವ ಬಗ್ಗೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ವಿಶೇಷ ಪಾಲನಾ ಯೋಜನೆಯ ಅನುದಾನವನ್ನು ಆರ್‌ಟಿಜಿಎಸ್ ಮೂಲಕ ಅರ್ಹ ಫಲಾನುಭವಿ ಗಳಿಗೆ ತಲುಪಿಸಬೇಕು ಎಂದರು.
ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪಾ ಎ.ಜೆ., ಮಕ್ಕಳ ಆಯೋಗದ ಸದಸ್ಯ ಡಿ.ಶಂಕರಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಚಂದ್ರ ಬಾಯಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಾಪಬೋವಿ ಮತ್ತಿತರರು ಉಪಸ್ಥಿತರಿದ್ದರು.