ಉಡುಪಿ: ನಕಲಿ ದಾಖಲೆಗಳೊಂದಿಗೆ ಅಡಿಕೆ ಸಾಗಾಟ; ಸಾಗಾಟದಾರರಿಂದ 53.10 ಲಕ್ಷ ರೂ. ದಂಡ ವಸೂಲಿ

Update: 2020-11-10 09:16 GMT

ಉಡುಪಿ, ನ.10: ಸರಕು ವಾಹನದಲ್ಲಿ ಕಾಸರಗೋಡಿನಿಂದ ಉತ್ತರ ಪ್ರದೇಶಕ್ಕೆ ನಕಲಿ ದಾಖಲೆಗಳೊಂದಿಗೆ ಅಡಿಕೆ ಸಾಗಣೆ ಮಾಡುತ್ತಿದ್ದ ಸಾಗಣೆದಾರರಿಂದ ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 53,10,500 ರೂ. ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಿದೆ.

ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಮೇ 23ರಂದು ರಸ್ತೆ ಜಾಗೃತಿ ಕಾರ್ಯ ನಡೆಸುವ ಸಂದರ್ಭದಲ್ಲಿ ಅಂಪಾರು- ಕೊಲ್ಲೂರು ರಸ್ತೆಯ ವಂಡ್ಸೆ ಎಂಬಲ್ಲಿ ಸರಕು ವಾಹನವನ್ನು ತಡೆಹಿಡಿದು ಅದರಲ್ಲಿ ಇದ್ದ 24700 ಕೆ.ಜಿ. ತೂಕದ ಒಟ್ಟು 380 ಚೀಲ ಅಡಿಕೆ ಸರಕನ್ನು ಮತ್ತು ವಾಹನವನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದರು.

ತನಿಖೆ ವೇಳೆ ಸರಕಿನ ಸಾಗಣೆದಾರರು ಕರ್ನಾಟಕದಲ್ಲಿ ಅಡಿಕೆಯನ್ನು ಪಡೆದು ಅದನ್ನು ಕೇರಳದ ವರ್ತಕರಿಗೆ ಸಂಬಂಧಿಸಿದ ನಕಲಿ ದಾಖಲೆಗಳೊಂದಿಗೆ ಕಾಸರಗೋಡಿನಿಂದ ಉತ್ತರ ಪ್ರದೇಶಕ್ಕೆ ಸಾಗಣೆ ಮಾಡುತ್ತಿರುವುದು ಪತ್ತೆ ಹಚ್ಚಲಾಗಿದೆ.

ಈ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 129(1)(ಬಿ)ರಡಿಯಲ್ಲಿ ಆದೇಶ ಹೊರಡಿಸಿ ಸಾಗಣೆದಾರರ ಪುತ್ತೂರು ಯೂನಿಯನ್ ಕಾರ್ಗೊ ಮೂವರ್ಸ್‌ ಇವರಿಂದ ಒಟ್ಟು 53,10,500 ರೂ. ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ(ಜಾರಿ) ಉದಯ ಶಂಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News