ಹೊರಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಸುವಲ್ಲಿ ಮನಪಾ ವಿಫಲ: ಡಿಎಸ್‌ಎಸ್

Update: 2020-11-10 12:07 GMT

 ಮಂಗಳೂರು, ನ.10: ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಒಳಚರಂಡಿ ವಿಭಾಗವನ್ನು ಹೊರಗುತ್ತಿಗೆ ಸಂಸ್ಥೆಗೆ ನೀಡಿದ್ದು, ಇದರಿಂದ ಕಾರ್ಮಿಕರಿಗೆ ಬಹಳ ಸಮಸ್ಯೆಯಾಗಿದೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ದ.ಕ. ಜಿಲ್ಲೆ ಶಾಖೆಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ್ ಎಚ್ಚರಿಕೆ ರವಾನಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಾಡಳಿತ ನಿರ್ದೇಶನಾಲಯ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗೆ ಲೋಡರ್ಸ್, ಕ್ಲೀನರ್ಸ್‌ ಮತ್ತು ಯುಜಿಡಿ ಹೆಲ್ಪರ್ಸ್‌ಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಗಳನ್ನು ಪ್ರಕಟಿಸುವ ಕುರಿತು ಸರಕಾರಕ್ಕೆ ಪ್ರಸ್ತಾಪ ಕಳುಹಿಸಲಾಗಿದೆ. ಈ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಂತೂ ಈವರೆಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದರು.

ಒಳಚರಂಡಿ ವಿಭಾಗವನ್ನು ಪಾಲಿಕೆಯು ಈಗಾಗಲೇ ಮೂರು ಗುತ್ತಿಗೆ ಸಂಸ್ಥೆಗಳಿಗೆ ಗುತ್ತಿಗೆ ನೀಡಿದೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಮನವಿ ನೀಡಿ ಪ್ರತಿಭಟಿಸಿದರೂ ಒಳಚರಂಡಿ ವಿಭಾಗದ ಕಾರ್ಮಿಕರ ಬೇಡಿಕೆ ಈಡೇರಿಸುವಲ್ಲಿ ಮನಪಾ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಸಂಘಟನೆಯು ಮನವಿ ನೀಡಿದ್ದು, ತನಿಖೆ ನಡೆಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕ ಇಲಾಖೆಯು ಹೊರಗುತ್ತಿಗೆ ಸಂಸ್ಥೆಯ ಜೊತೆ ಭಾಗಿಯಾಗಿರುವುದು ಖಂಡನೀಯ. ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ಕಾರ್ಮಿಕರು ದುಡಿಯುತ್ತಿದ್ದು, ಇತ್ತೀಚೆಗೆ ಪ್ರತಿಭಟನೆ ನಡೆಸಿ ಮನಪಾ ಆಯುಕ್ತರಿಗೆ ಮನವಿ ನೀಡಿದ್ದು, ಈವರೆಗೂ ಸಂಘಟನೆಯ ಬೇಡಿಕೆಗೆ ಸ್ಪಂದಿಸದೇ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಮನಪಾ ಎದುರು ಪ್ರತಿಭಟಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ಸ್ಪಂದನೆ ದೊರೆದಿ ದ್ದಲ್ಲಿ ‘ಬೆಂಗಳೂರು ಚಲೋ’ ನಡೆಸಲು ಸಂಘಟನೆಯ ರಾಜ್ಯ ಮುಖಂಡರು ಸಮ್ಮತಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದಸಂಸದ ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಉರ್ವಸ್ಟೋರ್, ಚಂದ್ರ ಕಡಂದಲೆ, ನವೀನ್, ಕಾರ್ಮಿಕರಾದ ಕೇಶವ ಪಚ್ಚನಾಡಿ, ಶರಣಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News