‘ಹೊಸ ರಾ.ಶಿಕ್ಷಣ ನೀತಿಯಡಿ ಮಾಹೆಯಲ್ಲಿ ನೂತನ ಕೋರ್ಸ್‌ಗಳು’

Update: 2020-11-10 16:01 GMT

ಉಡುಪಿ, ನ.10: ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಎಂಎಎಚ್‌ಇ-ಮಾಹೆ) ನೂತನ ಕಾರ್ಯಕ್ರಮಗಳನ್ನು ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಪರಿಚಯಿ ಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ತಿಳಿಸಿದ್ದಾರೆ.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅವರೊಂದಿಗೆ ನಡೆಸಿದ ವರ್ಚುವಲ್ ವೀಡಿಯೊ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಎಂಎಎಚ್‌ಇ ಇತ್ತೀಚೆಗೆ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯೊಂದಿಗೆ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ. ಅದರಂತೆ ಮಾಹೆ ಭವಿಷ್ಯದಲ್ಲಿ ನೂತನ ಸಂಸ್ಥೆಗಳು, ನೂತನ ವಿಭಾಗಗಳು ಹಾಗೂ ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಯೋಜನೆಗಳನ್ನು ಹೊಂದಿದೆ ಎಂದರು.

ಮಾಹೆ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗುವ ನೂತನ ಕ್ಯಾಂಪಸ್‌ಗಳನ್ನು ತೆರೆಯುವ ಕಡೆಗೆ ಹೆಚ್ಚಿನ ಗಮನ ಹರಿಸಲಿದೆ. ಸಂಶೋಧನೆ, ನವೀನತೆ, ಉದ್ಯಮಶೀಲತೆ ಹಾಗೂ ಸಹಭಾಗಿತ್ವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಮಾಹೆ ಆದ್ಯತೆ ನೀಡಲಿದೆ.ಇದರೊಂದಿಗೆ ದೇಶ, ವಿದೇಶಗಳಲ್ಲಿ ನೂತನ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ ಎಂದು ಡಾ. ವೆಂಕಟೇಶ್ ನುಡಿದರು.

ನ.20ಕ್ಕೆ ಘಟಿಕೋತ್ಸವ: ಪ್ರಸಕ್ತ ವರ್ಷದ ಮಾಹೆ ಘಟಿಕೋತ್ಸವ ನ.20,21, 22ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿದೆ. ಈ ಘಟಿಕೋತ್ಸವಕ್ಕೆ ಸುಮಾರು 3500 ಮಂದಿ ಪದವೀಧರರು ಈಗಾಗಲೇ ನೊಂದಾವಣಿ ಮಾಡಿ ಕೊಂಡಿದ್ದಾರೆ. ಮೊದಲ ದಿನದ ಕಾರ್ಯಕ್ರಮಕ್ಕೆ ಒ.ಪಿ.ಜಿಂದಾಲ್ ಗ್ಲೋಬಲ್ ವಿವಿಯ ಕುಲಪತಿ ಡಾ.ಸಿ.ರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಕೋವಿಡ್ ಯುಗದಲ್ಲಿ ಮುಖ್ಯವಾಗಿ ಬದಲಾಗುತ್ತಿರುವ ಶಿಕ್ಷಣದ ಸ್ಥಿತಿಗಳನ್ನು ಪರಿಗಣಿಸಿ ರಾಷ್ಟ್ರೀಯ ಶಿಕ್ಷಣ ನೀತಿ, ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಕೋರ್ಸ್‌ಗಳನ್ನು ನಡೆಸಲಾಗುವುದು. ಅಲ್ಲದೇ ಸಂಸ್ಥೆಗಳು ಹೆಚ್ಚು ಕೌಶಲ್ಯಾಧಾರಿತ ಕಲಿಕೆಯ ಕಡೆಗೆ ಗಮನ ನೀಡಲಿದೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸಲು ತಂತ್ರಜ್ಞಾನಗಳನ್ನು ಹೆಚ್ಚು ಹೆಚ್ಚು ಬಳಸುವುದರ ಜೊತೆಗೆ ಉತ್ತಮ ಪ್ರಗತಿ ಸಾಧಿಸಲಿದ್ದೇವೆ ಎಂಬ ವಿಶ್ವಾಸವಿದೆ ಎಂದರು.

ಎಂಎಎಚ್‌ಇ ನೂತನ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಪಠ್ಯಕ್ರಮಗಳನ್ನು ರಚಿಸಲಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಹೆಚ್ಚು ಸ್ಥಿತಿಸ್ಥಾಪಕತೆ ಹೊಂದಿ ರುವಂತೆ, ಶಿಕ್ಷಣಾರ್ಥಿಗಳಿಗೆ ಉಪಯುಕ್ತವಾಗಿರುವಂತೆ ನೋಡಿಕೊಳ್ಳಲಾ ಗುವುದು. ಸಂಪೂರ್ಣ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಕಡೆಗೆ ಮಾಹೆ ಬದ್ಧತೆಯನ್ನು ಹೊಂದಿದೆ ಎಂದು ಡಾ.ವೆಂಕಟೇಶ್ ನುಡಿದರು.

ಕೇಂದ್ರ ಸರಕಾರ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಸಮಿತಿಯ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಪೋಷಕರ ಒಪ್ಪಿಗೆ ಪಡೆದು ಹಂತ ಹಂತವಾಗಿ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ಗಳಿಗೆ ಆಹ್ವಾನಿಸುವ ಯೋಜನೆಯನ್ನು ಮಾಹೆ ಹೊಂದಿದೆ. ಸುರಕ್ಷತಾ ಅಂತರ ಕಾಯ್ದು ಕೊಂಡು, ನಿಗದಿತ ಸೋಂಕು ನಿವಾರಕ ಸಿಂಪರಣೆ ಕೈಗೊಂಡು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News