ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರಿಂದ ಸಂಸತ್ ಗ್ರಂಥಾಲಯಕ್ಕೆ ಮಹಾಭಾರತ ಗ್ರಂಥ ಸಮರ್ಪಣೆ

Update: 2020-11-10 16:09 GMT

ಉಡುಪಿ, ನ.10: ಉಡುಪಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ತಮ್ಮ ಪರ್ಯಾಯಾವಧಿಯಲ್ಲಿ ಪ್ರಕಟಿಸಿದ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ (ಸಂಸ್ಕೃತದಲ್ಲಿ ರಚಿಸಲಾದ 24 ಸಂಪುಟಗಳು) ಒಂದು ಪ್ರತಿಯನ್ನು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಮಂಗಳವಾರ ಸಂಸತ್ತಿನ ಗ್ರಂಥಾಲಯಕ್ಕೆ ಸಮರ್ಪಿಸಿದ್ದಾರೆ.

ಪಲಿಮಾರು ಮಠದ ತತ್ವ ಸಂಶೋಧನ ಸಂಸತ್ ವತಿಯಿಂದ ಶ್ರೀವಿದ್ಯಾಧೀಶತೀರ್ಥರ ನೇತೃತ್ವದಲ್ಲಿ ಪ್ರಕಟಗೊಂಡ ಗ್ರಂಥವನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಗಳ ಉಪಸ್ಥಿತಿಯಲ್ಲಿ ಪಲಿಮಾರು ಮಠದ ಪರ್ಯಾಯ ಸಂದರ್ಭದಲ್ಲಿ ಶ್ರೀಕೃಷ್ಣ ಮಠದಲ್ಲಿ ಲೋಕಾರ್ಪಣೆ ಗೊಳಿಸಲಾಗಿತ್ತು.

ಈ ಗ್ರಂಥದ 24 ಸಂಪುಟಗಳ ತಲಾ ಒಂದು ಪ್ರತಿಯನ್ನು ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಸಚಿವರೊಂದಿಗೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಕಾರ್ಯಕ್ರಮವನ್ನು ವಾಸುದೇವ ಭಟ್ ಪೆರಂಪಳ್ಳಿ ಸಂಯೋಜಿಸಿದ್ದರು. ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ, ಅನಂತ ಜಿ.ಎ., ಕೃಷ್ಣ ಭಟ್, ಪೇಜಾವರ ಮಠದ ದೆಹಲಿ ಶಾಖೆಯ ವ್ಯವಸ್ಥಾಪಕ ದೇವೀಪ್ರಸಾದ್ ಭಟ್ ಉಪಸ್ಥಿತರಿದ್ದರು. 

ತುಳು ಲಿಪಿಯ ಹಸ್ತಾಕ್ಷರ: ಈ ಮಹಾಭಾರತ ಗ್ರಂಥಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು ತುಳು ಹಸ್ತಾಕ್ಷರವನ್ನೂ ಹಾಕಿರುವುದರಿಂದ ಸಂಸತ್ ಗ್ರಂಥಾಲಯಕ್ಕೆ ತುಳು ಲಿಪಿಗೂ ಪ್ರವೇಶ ದೊರೆತಂತಾಗಿದೆ.

ನಿರ್ಮಲಾ ಸೀತಾರಾಮನ್ ಭೇಟಿ:  ಶ್ರೀವಿಶ್ವಪ್ರಸನ್ನ ತೀರ್ಥರು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಉಡುಪಿಯ ನೇಕಾರರು ತಯಾರಿಸಿದ ಎರಡು ಉಡುಪಿ ಸೀರೆಯನ್ನು ದೀಪಾವಳಿಯ ಉಡುಗೊರೆಯಾಗಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News