ಹರಿಕೃಷ್ಣ ಬಂಟ್ವಾಳ್ ವಿರುದ್ಧ ಎಸ್.ಡಿ.ಪಿ.ಐ.ಯಿಂದ ಬಂಟ್ವಾಳ ಠಾಣೆಗೆ ದೂರು
ಬಂಟ್ವಾಳ, ನ.11: ಪಕ್ಷದ ವಿರುದ್ಧ ಸುಳ್ಳು ಮತ್ತು ನಿರಾಧಾರವಾದ ಗಂಭೀರ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಬಂಟ್ವಾಳ ನಗರ ಠಾಣೆಗೆ ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯ ಮುಹಮ್ಮದ್ ಇದ್ರೀಸ್ ಎಂಬವರು ದೂರು ನೀಡಿದ್ದಾರೆ.
ಇತ್ತೀಚೆಗೆ ನಡೆದ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲು 5 ಲಕ್ಷ ರೂ. ನೀಡುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಳಿ ಎಸ್.ಡಿ.ಪಿ.ಐ.ಯವರು ಹೇಳಿದ್ದಾರೆ ಎಂದು ನ.8ರಂದು ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಮತ್ತು ಇರ್ವತ್ತೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಹರಿಕೃಷ್ಣ ಬಂಟ್ವಾಳ್ ಅವಮಾನಕಾರಿ ಭಾಷಣ ಮಾಡುವ ಮೂಲಕ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಹರಿಕೃಷ್ಣ ಬಂಟ್ವಾಳ್ ಮಾಡಿರುವ ಆರೋಪದಿಂದ ಎಸ್.ಡಿ.ಪಿ.ಐ. ಮೇಲೆ ಗಂಭೀರ ಪರಿಣಾಮ ಬೀರಿದೆ. ಪಕ್ಷಕ್ಕೆ ಭಾರೀ ಅವಮಾನ ಉಂಟಾಗಿದೆ. ಪಕ್ಷದ ಬೆಂಬಲಿಗರಿಗೆ ಪಕ್ಷದ ಮೇಲೆ ನಂಬಿಕೆ ಕಡಿಮೆಯಾಗುವಂತಾಗಿದೆ. ಪಕ್ಷದ ಬಗ್ಗೆ ಸಮಾಜದಲ್ಲಿ ನಕರಾತ್ಮ ಭಾವನೆ ಉಂಟಾಗುವಂತಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ನಿರಾಧಾರ ಆರೋಪ ಮಾಡಿರುವ ಹರಿಕೃಷ್ಣ ಬಂಟ್ವಾಳ್ ಮತ್ತು ಕಾರ್ಯಕ್ರಮ ಆಯೋಜನೆ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮುಹಮ್ಮದ್ ಇದ್ರೀಸ್ ಒತ್ತಾಯಿಸಿದ್ದಾರೆ.