ಮಂಗಳೂರು: ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧದ ಬಿಸಿ

Update: 2020-11-11 12:26 GMT

ಮಂಗಳೂರು, ನ.11: ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರವು ಪಟಾಕಿ ಸುಡುವುದನ್ನು ನಿಷೇಧಿಸಿರುವುದು ದೀಪಾವಳಿ ಹಬ್ಬಕ್ಕೆ ಬಿಸಿಯಾಗಿ ಪರಿಣಮಿಸುವ ಸಾಧ್ಯತೆ ನಿಚ್ಛಳವಾಗಿದೆ. ಬಿಜೆಪಿ ಆಡಳಿತದ ರಾಜ್ಯ ಸರಕಾರದಿಂದಲೇ ಹೊರಡಿಸಲಾದ ಈ ಆದೇಶದಿಂದ ಸಾರ್ವಜನಿಕರು ಮತ್ತು ಪಟಾಕಿ ಅಂಗಡಿಗಳ ಮಾಲಕರು ಗೊಂದಲಕ್ಕೀಡಾಗಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಕಳೆದ ವರ್ಷ ದೀಪಾವಳಿಯ ಪಟಾಕಿ ಸಂಭ್ರಮವನ್ನು ಗಾಳಿಮಳೆ ಕಸಿದುಕೊಂಡಿದ್ದರೆ, ಈ ಬಾರಿ ಕೋವಿಡ್-19 ಅಡ್ಡಿಯಾಗು ತ್ತಿವೆ. ಇದರಿಂದ ಸಾರ್ವಜನಿಕ ವಲಯದಿಂದ ತೀವ್ರ ಅಪಸ್ವರ ಕೇಳಿ ಬಂದಿದೆ. ಅಲ್ಲದೆ ಅಂಗಡಿಗಳ ಮಾಲಕರು ಕೂಡ ಸರಕಾರದ ದಿಢೀರ್ ತೀರ್ಮಾನದಿಂದ ಕಂಗಲಾಗಿದ್ದಾರೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೆಚ್ಚು ಜನರು ಖರೀದಿಗೆ ಬರುವುದಿಲ್ಲವೆಂದು ಪಟಾಕಿ ಸಂಗ್ರಹವನ್ನು ಕಡಿಮೆ ಮಾಡಿದ್ದೆವು. ಆದರೆ, ಈಗ ಹಸಿರು ಪಟಾಕಿ, ಸಾಮಾನ್ಯ ಪಟಾಕಿಗಳ ನಡುವಿನ ಗೊಂದಲದಲ್ಲಿ ಜನರು ಖರೀದಿಗೆ ಬರುವುದು ಅನುಮಾನವಾಗಿದೆ. ಕಳೆದ ವರ್ಷ ಉದ್ಯಮ ನಷ್ಟವಾದಾಗ ಆಘಾತವಾಗಿತ್ತು. ಹಾಗಾಗಿ ಈ ಬಾರಿ ಮೊದಲೇ ಮಾನಸಿಕವಾಗಿ ಸಿದ್ಧರಾಗಿದ್ದೆವು. ಆದರೆ ನಿಷೇಧದಿಂದ ವ್ಯಾಪಾರ ನಷ್ಟವಾಗುವ ಸಾಧ್ಯತೆ ಇದೆ ಎಂದು ಮಂಗಳೂರು ಮಾರ್ಕೆಟ್ ರಸ್ತೆಯ ಪಟಾಕಿ ಅಂಗಡಿಯ ಮಾಲಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಶಿವಕಾಶಿಯಿಂದ ಮಂಗಳೂರಿಗೆ ಪಟಾಕಿ ತರಿಸಲಾಗಿದ್ದು, ವ್ಯಾಪಾರಕ್ಕೆ ಅಣಿಯಾಗುತ್ತಿದ್ದಂತೆಯೇ ಹಸಿರು ಪಟಾಕಿ ಖರೀದಿ ಹೊರತುಪಡಿಸಿ ಇತರ ಪಟಾಕಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಪೂರ್ವ ತಯಾರಿಯ ಬಳಿಕ ಸರಕಾರ ಈ ತೀರ್ಮಾನ ಕೈಗೊಂಡಿರುವುದರಿಂದ ಗೊಂದಲ ಶುರುವಾಗಿದೆ. ಇದರಿಂದ ವ್ಯಾಪಾರದ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಪಟಾಕಿ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಸುಮಾರು 400ಕ್ಕೂ ಅಧಿಕ ಪಟಾಕಿ ಮಾರಾಟಗಾರರಿದ್ದಾರೆ. ಹಬ್ಬದ ಸಂದರ್ಭ 1 ಸಾವಿರಕ್ಕೂ ಅಧಿಕ ಮಂದಿ ತಾತ್ಕಾಲಿಕ ಅಂಗಡಿ ತೆರೆಯುತ್ತಾರೆ. ದೀಪಾವಳಿಯ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಅಂದಾಜು 5 ಕೋ.ರೂ. ವಹಿವಾಟು ನಡೆಯುತ್ತದೆ. ಆದರೆ ಈ ಬಾರಿ ಸರಕಾರದ ಆದೇಶವು ಈ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ ಎಂದು ಪಟಾಕಿ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಪಟಾಕಿ ಸುಡುವುದನ್ನು ಕಡಿಮೆ ಮಾಡಬಹುದು. ಆದರೆ ಕೊರೋನ ರೋಗ ಮತ್ತು ಪಟಾಕಿಗೆ ಯಾವುದೇ ಸಂಬಂಧವಿಲ್ಲ. ಜನರ ಆಚರಣೆಗೆ ಸರಕಾರ ಅಡಚಣೆ ಮಾಡಬಾರದು. ಚುನಾವಣೆ ನಡೆಸಲು, ಗೆದ್ದಾಗ ಪಟಾಕಿ ಸಿಡಿಸಲು ಅಡ್ಡಿ ಇಲ್ಲ. ಸಾರ್ವಜನಿಕರಿಗೆ ಮಾತ್ರ ಇಂತಹ ಆದೇಶಗಳು ಎಷ್ಟು ಸರಿ ಎಂದು ಸಾಮಾಜಿಕ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಪಟಾಕಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿದ ಅದೇಶ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ಪಟಾಕಿ ಉದ್ಯಮಕ್ಕೆ ಬಿಸಿಯಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News