ಮಲ್ಪೆವಾಸುದೇವ ಸಾಮಗರಿಗೆ ಯಕ್ಷಾಂಗಣದ ನುಡಿ ನಮನ

Update: 2020-11-11 12:28 GMT

 ಮಂಗಳೂರು, ನ.11: ಎಂ.ಆರ್. ವಾಸುದೇವ ಸಾಮಗರು ಯಕ್ಷಗಾನ ಆಟ-ಕೂಟಗಳ ಅತ್ಯದ್ಭುತ ಕಲಾಕಾರ. ಅವರು ತಮ್ಮ ಅಪಾರ ಕಲ್ಪನಾ ಸಾಮರ್ಥ್ಯದಿಂದ ಚಿತ್ರಿಸಿದ ಪಾತ್ರಗಳು ಇತರರ ಅಳವಿಗೆ ನಿಲುಕದ್ದು. ವಾ.ಸಾಮಗರಿಗೆ ಅವರೇ ಸಾಟಿ. ಅವರ ಸ್ಥಾನವನ್ನು ತುಂಬಬಲ್ಲ ವಿಕ್ಷಿಪ್ತ ಪ್ರತಿಭೆಗಳು ಬೇರೆಡೆ ಇಲ್ಲ. ಯಕ್ಷರಂಗದಲ್ಲಿ ಬಹುದೊಡ್ಡ ನಿರ್ವಾತವನ್ನು ನಿರ್ಮಿಸಿ ಅವರು ನಿರ್ಗಮಿಸಿದ್ದಾರೆ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಮಲ್ಪೆವಾಸುದೇವ ಸಾಮಗರ ಸ್ಮರಣಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.

ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸಂತಾಪ ಸೂಚಕ ಠರಾವು ಮಂಡಿಸಿದರು. ಯಕ್ಷಗಾನ ಸಂಘಟಕ ಕರುಣಾಕರ ಶೆಟ್ಟಿ ಪಣಿಯೂರು, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉಪಾಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷ್ಮಿನಾರಾಯಣ ರೈ ಹರೇಕಳ ಮತ್ತು ಉಮೇಶ ಆಚಾರ್ಯ ಗೇರುಕಟ್ಟೆ ಸಂತಾಪ ಸೂಚಿಸಿದರು.

ರಾಜ್ಯೋತ್ಸವ ಕಲಾ ಸಂಭ್ರಮ

ನಗರದ ಕದ್ರಿಕಂಬಳ ಗ್ರಹ ಕಚೇರಿಯಲ್ಲಿ ಜರಗಿದ ಯಕ್ಷಾಂಗಣ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಎಂಟು ವರ್ಷಗಳಿಂದ ಯಕ್ಷಾಂಗಣ ಆಯೋಜಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ’ಯಕ್ಷಗಾನ ತಾಳಮದ್ದಲೆ ಸಪ್ತಾಹ’ ವನ್ನು ಈ ಬಾರಿ ಕೋವಿಡ್ - 19 ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಸರಕಾರದ ನಿಯಮಾವಳಿಗೊಳಪಟ್ಟು ನ.29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಸಭಾಂಗಣದಲ್ಲಿ ‘ರಾಜ್ಯೋತ್ಸವ ಕಲಾ ಸಂಭ್ರಮ - 2020’ ಕಾರ್ಯಕ್ರಮದಲ್ಲಿ ಯಕ್ಷಾಂಗಣ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಶ್ರೀಕೃಷ್ಣ ತಂತ್ರ’ ಯಕ್ಷಗಾನ ತಾಳಮದ್ದಳೆಯನ್ನು ನಡೆಸಲು ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News