‘ಕಲಬೆರಕೆ ಉತ್ಪನ್ನ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ’

Update: 2020-11-11 14:08 GMT

ಉಡುಪಿ, ನ.11: ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಲಬೆರೆಕೆ ಉತ್ಪನ್ನಗಳ ತಯಾರಕರು ಸೇರಿದಂತೆ ಮಾರಾಟ ಗಾರರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷ್ಯಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತೆಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಕಲಬೆರಕೆ ಉತ್ಪನ್ನಗಳು ಮಾರಾಟ ವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇಂತಹ ರಾಸಾಯನಿಕ ಮಿಶ್ರಿತ ಕಲಬೆರಕೆ ಆಹಾರಗಳ ಸೇವನೆಯಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಮಾರಕ ರೋಗ ಗಳು ಕಾಣಿಸಿಕೊಳ್ಳಬಹುದು. ಇವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಬೇಕೆಂದು ಸೂಚನೆ ನೀಡಿದರು.

ಆಹಾರ ಉದ್ಯಮಿಗಳು ತಮ್ಮ ಆಹಾರ ತಯಾರಿಕಾ ಕಾರ್ಯ ಚಟುವಟಿಕೆ ಗಳನ್ನು ಕೈಗೊಳ್ಳಲು ಎಫ್.ಎಸ್.ಎಸ್.ಐ ಅಡಿಯಲ್ಲಿ ತಪ್ಪದೇ ಕಾನೂನಿನ ಅನ್ವಯ ನೊಂದಣಿ ಮಾಡಿ ಪರವಾನಿಗೆ ಪಡೆಯಬೇಕು. ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸಿಹಿಪದಾರ್ಥ, ಕಾಂಡಿಮೆಂಟ್ಸ್ ತಯಾರಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ತಪ್ಪದೇ ತಯಾರಿಸಿದ ದಿನಾಂಕ ಹಾಗೂ ಬಳಕೆ ಅವಧಿ ಮುಗಿಯುವ ದಿನಾಂಕ ಗಳನ್ನು ಟ್ರೈನಲ್ಲಿ ಪ್ರದರ್ಶಿಸಬೇಕು. ತಪ್ಪಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಸಾದ, ಭೋಜನವನ್ನು ವಿತರಿಸುವ ಆರಾಧನಾಲಾಯಗಳು ಕಡ್ಡಾಯವಾಗಿ ನೊಂದಣಿ ಮಾಡುವುದರೊಂದಿಗೆ ಪರವಾನಿಗೆ ಪಡೆಯಬೇಕು. ಪ್ರಸಾದ ತಯಾರಿಕಾ ಕೋಣೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಯಾವುದೇ ಅನಧಿಕೃತ ವ್ಯಕ್ತಿಗಳು ಇಲ್ಲಿಗೆ ಪ್ರವೇಶಿಸದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.

ಮೀನುಗಳನ್ನು ಪರಿಶೀಲಿಸಿ: ಜಿಲ್ಲೆಗೆ ಹೊರಗಿನಿಂದ ಬರುವ ಹಾಗೂ ಇಲ್ಲಿಂದ ಹೋಗುವ ಮೀನುಗಳು ಕೆಡದಂತೆ ಮಾಡಲು ರಾಸಾಯನಿಕ ಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಅಧಿಕಾರಿಗಳು ಆ ಮೀನುಗಳನ್ನು ಪರೀಕ್ಷೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸಹ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಆಹಾರ ದಾಸ್ತಾನು ಗಳ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೆೀಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳು, ಹೋಟೆಲ್‌ಗಳು, ಬೇಕರಿಗಳು ಸೇರಿದಂತೆ ಮತ್ತಿತರ ಆಹಾರ ಉತ್ಪನ್ನ ತಯಾರಿಕಾ ಘಕಟಗಳಿಗೆ ಅಧಿಕಾರಿಗಳು ಆಗಿಂದ್ದಾಗೆ ಭೇಟಿ ನೀಡಿ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು. ಆಹಾರ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಆಹಾರ ಮಾದರಿ ಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದರು.

ಹಾಲು ಹಾಗೂ ಹಾಲಿನ ಉತ್ಪನ್ನಗಳು, ಕುಡಿಯುವ ನೀರಿನ ಮಾದರಿಗಳನ್ನು ಪಡೆದು ಪ್ರಯೋಗ ಶಾಲೆಯಲ್ಲಿ ವಿಶ್ಲೇಷಣೆಗೆ ಕಳುಹಿಸಿ ಫಲಿತಾಂಶದ ಆಧಾರದ ಮೇಲೆ ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಹೋಟೆಲ್‌ಗಳು ಸೇರಿದಂತೆ ಎಣ್ಣೆ, ಕರಿದ ಪದಾರ್ಥ ಗಳನ್ನು ಉತ್ಪಾದಿಸುವವರು ಕರಿದ ಎಣ್ಣೆಯನ್ನೇ ಮರು ಬಳಕೆ ಮಾಡದಂತೆ ಆಹಾರ ತಪಾಸಣಾ ಅಧಿಕಾರಿಗಳು ಸೂಚನೆ ನೀಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ವಾಸುದೇವ, ಹಿರಿಯ ಆಹಾರ ಸುರಕ್ಷಿತ ಅಧಿಕಾರಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News