ಆಶಾದೀಪ ಯೋಜನೆ ಪ್ರಯೋಜನ ಪಡೆಯಿರಿ: ಉಡುಪಿ ಜಿಲ್ಲಾಧಿಕಾರಿ

Update: 2020-11-11 14:10 GMT

ಉಡುಪಿ, ನ.11: ಕರ್ನಾಟಕ ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು, ಉದ್ದಿಮೆಗಳ ಮಾಲಕರನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದಿರುವ ಆಶಾ ದೀಪ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಉದ್ದಿಮೆದಾರರು ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಶಾದೀಪ ಯೋಜನೆ ಅನುಷ್ಠಾನದ ಪ್ರಗತಿ ಮತ್ತು ಯೋಜನೆಯ ಅರ್ಜಿಗಳ ಪ್ರಾಥಮಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಶಾದೀಪ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲಾ ಉದ್ದಿಮೆದಾರರಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಹಾಗೂ ಯೋಜನೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕಾರ್ಮಿಕ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಆಶಾದೀಪ ಯೋಜನೆಯಡಿ ಖಾಸಗಿ ವಲಯದ ಸಂಸ್ಥೆಗಳಲ್ಲಿ ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ, ಅಪ್ರೆಂಟಿಸ್ ತರಬೇತಿ ನೀಡಿದ್ದಲ್ಲಿ ಅಂತಹ ಸಂಸ್ಥೆಗಳ ಉದ್ಯೋಗದಾತರು/ ಮಾಲಕರಿಗೆ ನಿಗದಿತ ಅವಧಿಯವರೆಗೆ ಅವರು, ಪ.ಜಾತಿ, ವರ್ಗದ ಸಿಬ್ಬಂದಿಗಳಿಗೆ ನೀಡುವ ವೇತನದ ನಿಗದಿತ ಮೊತ್ತವನ್ನು ಸರಕಾರದಿಂದ ಮರುಪಾವತಿ ಮಾಡಲಾಗುವುದು ಎಂದರು.

ಆಶಾದೀಪ ಯೋಜನೆಯ ಪ್ರಯೋಜನವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ ಏಕೋ ಕೆಮ್ ಲ್ಯಾಬೋರೇಟರೀಸ್ ಸಂಸ್ಥೆಯ ಮಾಲೀಕರಿಗೆ 1,03,035 ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ವಿತರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮ್ ಸಾಗರ್ ಹಾಗೂ ವಿವಿಧ ಇಲಾಖೆಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News