ಸಂಪತ್‌ರಾಜ್‌ನನ್ನು ಸರಕಾರ ಕೂಡಲೇ ಬಂಧಿಸಬೇಕು: ನಳಿನ್ ಕುಮಾರ್

Update: 2020-11-12 12:28 GMT

ಉಡುಪಿ, ನ.12: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲಿನ ದಾಳಿಗೆ ಸಂಬಂಧಿಸಿ ಮಾಜಿ ಮೇಯರ್ ಸಂಪತ್‌ರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ಸರಕಾರ ಕೂಡಲೇ ಬಂಧಿಸಬೇಕು. ಸಂಪತ್‌ರಾಜ್ ನ್ನು ಪೊಲೀಸರಿಗೆ ಒಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು. ಅಖಂಡ ಶ್ರೀನಿವಾಸ್‌ಗೆ ನ್ಯಾಯ ಒದಗಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡುತ್ತದೆ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ನೈತಿಕತೆ ಇದ್ದರೆ ಸಂಪತ್‌ರಾಜ್‌ಗೆ ಶರಣಾಗುವಂತೆ ಹೇಳಬೇಕು. ಸಂಪತ್‌ರಾಜ್ ತಪ್ಪಿಸಿಕೊಳ್ಳುವುದರ ಹಿಂದೆ ಸಿದ್ಧರಾಮಯ್ಯ ಹಾಗೂ ಡಿಕೆಶಿ ಪ್ರಭಾವ ಇದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಬೇಕಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ನಾವು ರಾಜಕೀಯ ಕಾರಣಕ್ಕಾಗಿ ಬೆಂಬಲಿಸು ತ್ತಿಲ್ಲ. ಅವರನ್ನು ಯಾವ ಕಾರಣಕ್ಕೂ ಬಿಜೆಪಿಗೆ ತೆಗೆದುಕೊಳ್ಳುತ್ತಿಲ್ಲ. ಸಜ್ಜನ ಶಾಸಕರ ಮನೆ ಮೇಲೆ ದಾಳಿ ನಡೆಸಿರುವುದು ರಾಜಕೀಯದಲ್ಲಿ ಸರಿಯಲ್ಲ ಎಂರು.

ಉಪಚುನಾವಣೆ ಸೋಲಿಗೆ ಡಿಕೆಶಿ ಮತ್ತು ಸಿದ್ಧರಾಮಯ್ಯ ಕಾರಣ ಎಂಬುದಾಗಿ ಕಾರ್ಯಕರ್ತರು ಹೈಕಮಾಂಡಿಗೆ ಪತ್ರ ಬರೆದಿರುವುದು ಬಹಿರಂಗ ಆಗಿದೆ. ವ್ಯವಸ್ಥಿತ ರೀತಿಯಲ್ಲಿ ಚುನಾವಣೆ ಎದುರಿಸಿರುವುದು ಬಿಜೆಪಿಯ ತಂತ್ರಗಾರಿಕೆಯಾಗಿದೆ. ಆರ್.ಆರ್.ನಗರ ಸೋಲಬೇಕು ಎಂಬುದಾಗಿ ಸಿದ್ಧ ರಾಮಯ್ಯ, ಶಿರಾ ಸೋಲಬೇಕು ಎಂಬುದಾಗಿ ಡಿಕೆಶಿ ಒಳರಾಜಕಾರಣ ಮಾಡಿದ್ದಾರೆ. ಇದು ಬಿಜೆಪಿಗೆ ಲಾಭ ಆಗಿದೆ. ಈ ವಿಚಾರ ಕಾರ್ಯ ಕರ್ತರಿಗೆ ಗೊತ್ತಾಗಿ ಅಸಮಾಧಾನ ಭುಗಿಲೆದ್ದಿದೆ ಎಂದು ಅವರು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆಯೇ ಅಥವಾ ಸರ್ಜರಿಯೇ ಎಂಬುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಅವರೇ ಎಲ್ಲ ತೀರ್ಮಾನ ತೆಗೆದುಕೊಂಡು ಬಳಿಕ ಪಕ್ಷದಲ್ಲಿ ಮಾತುಕತೆ ನಡೆಯಲಿದೆ ಎಂದರು. ಕರಾವಳಿಗೆ ಹೆಚ್ಚಿನ ಸಚಿವ ಸ್ಥಾನ ಸಿಗಬಹುದೇ ಅಥವಾ ಕಳೆದುಕೊಳ್ಳಬಹುದೇ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಎಲ್ಲವನ್ನು ಗಮನಿಸುತ್ತಾರೆ. ಮುಂದಿನ ಎರಡೂವರೆ ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಲು ಮತ್ತು ರಾಜ್ಯದ ಹಿತದೃಷ್ಠಿಯಿಂದ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅವರು ನಮಗಿಂತ ಹಿರಿಯರು ಆಗಿರುವುದರಿಂದ ಅವರಿಗೆ ನಾವು ಸಲಹೆ ನೀಡಬೇಕಾಗಿಲ್ಲ ಎಂದು ಹೇಳಿದರು.

ಯತ್ನಾಳ್ ವಿರುದ್ಧ ಕ್ರಮ ಪಕ್ಷಕ್ಕೆ ಬಿಟ್ಟದ್ದು

ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸರಕಾರಕ್ಕೆ ಮುಜುಗರ ಆಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಪಕ್ಷ ಮತು ರಾಜ್ಯ ಸರಕಾರ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಪಕ್ಷದಲ್ಲಿ ಯಾರು ಕೂಡ ಪಕ್ಷದ ಸೀಮಿತ, ನಿಯಮಗಳನ್ನು ಮೀರಿ ವರ್ತನೆ ಮಾಡಬಾರದು. ಈ ಸಂಬಂಧ ನಾವು ಪಕ್ಷದ ವಿಚಾರ, ಸಿದ್ಧಾಂತ ಹಾಗೂ ನಿಯಮದ ಆಧಾರದಲ್ಲಿ ಮಾತುಕತೆ ಮಾಡಿದ್ದೇವೆ. ಅವರ ವಿರುದ್ಧ ಪಕ್ಷದ ಒಳಗೆ ಏನು ತೀಮಾನ ತೆಗೆದುಕೊಳ್ಳಬೇಕು ಎಂಬುದು ನಮಗೆ ಬಿಟ್ಟದ್ದು. ಅದನ್ನು ನಾವು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News