ನ.17ರಿಂದ ಉಡುಪಿ ಜಿಲ್ಲೆಯಲ್ಲಿ ಪದವಿ ತರಗತಿಗಳು ಪ್ರಾರಂಭ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-11-12 13:18 GMT

ಉಡುಪಿ, ನ.12: ಉಡುಪಿ ಜಿಲ್ಲೆಯಲ್ಲಿ ನವೆಂಬರ್ 17ರಿಂದ ಅಂತಿಮ ವರ್ಷದ ಪದವಿ ತರಗತಿಗಳನ್ನು ಸರಕಾರದ ಕೋವಿಡ್-19 ಮಾರ್ಗಸೂಚಿ ಯಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಗುರುವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸರಕಾರಿ /ಖಾಸಗಿ/ಅನುದಾನಿತ/ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆ ಗಳನ್ನು ಪ್ರಮಾಣಿತ ಕಾರ್ಯಾಚರಣ ಮಾರ್ಗಸೂಚಿಯನ್ವಯ ಪ್ರಾರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರದೊಂದಿಗೆ ಕಾಲೇಜು ತರಗತಿಗಳಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾಲೇಜು ಆರಂಭದ ಕನಿಷ್ಠ 3 ದಿನಗಳ ಮುಂಚೆ ಎಲ್ಲಾ ಅಧ್ಯಾಪಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಪಡೆದಿರಬೇಕು. ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸಂಪೂರ್ಣ ಸ್ಯಾನಟೈಸ್ ಮಾಡಬೇಕು. ಕಾಲೇಜುಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್‌ಶೀಲ್ಡ್ ಧರಿಸಬೇಕು. ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳನ್ನು ಆರಂಭಿಸುವಂತಿಲ್ಲ ಎಂದು ಅವರು ಸೂಚಿಸಿದರು.

ಕೊಠಡಿಯಲ್ಲಿ ಸುರಕ್ಷತಾ ಅಂತರದಲ್ಲಿ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಅವಶ್ಯವಿದ್ದಲ್ಲಿ ಹೆಚ್ಚುವರಿ ಕೊಠಡಿ ಬಳಕೆ ಮಾಡಿಕೊಳ್ಳಬೇಕು. ಕಾಲೇಜಿನ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಕಾಲೇಜಿನ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಗರಿಷ್ಠ ಪ್ರಮಾಣದಲ್ಲಿ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಕಾಲೇಜಿನಲ್ಲಿ ಕೋವಿಡ್ ನಿಯಂತ್ರಣ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಮೂಡಿಸುವ ಬ್ಯಾನರ್ ಮತ್ತು ಫಲಕಗಳನ್ನು ಅಳವಡಿಸಬೇಕು. ಕೋವಿಡ್ ನಿಯಂತ್ರಣ ಕುರಿತಂತೆ ಪಾಲಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಚನ ಪಡೆಯಬೇಕು. ಪ್ರತೀ ಕಾಲೇಜಿನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆ ರಚಿಸಿ, ನಿಗದಿತವಾಗಿ ಸಭೆಗಳನ್ನು ನಡೆಸಿ, ಸುರಕ್ಷತಾ ಕ್ರಮಗಳಲ್ಲಿ ಲೋಪ ವಾಗದಂತೆ ಪರಿಶೀಲಿಸಬೇಕು ಎಂದರು.

ಕಾರ್ಯಪಡೆ ಭೇಟಿ: ಜಿಲ್ಲಾ ಕಾರ್ಯಪಡೆಯ ಮೂಲಕ ಕಾಲೇಜುಗಳಿಗೆ ಭೇಟಿ ನೀಡಿ, ಕೈಗೊಂಡಿರುವ ಸುರಕ್ಷಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಲೋಪಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಬಸ್ಸಿನ ಕೊರತೆ ಇದ್ದಲ್ಲಿ ಯಾವ ಮಾರ್ಗಗಳಲ್ಲಿ ಬಸ್‌ನ ಕೊರತೆ ಇದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಲ್ಲಿ, ಆ ರೂಟ್‌ನಲ್ಲಿ ಹೆಚ್ಚುವರಿಯಾಗಿ ಖಾಸಗಿ ಮತ್ತು ಸರಕಾರಿ ಬಸ್‌ಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಾಲೇಜುಗಳಿಗೆ ಕೋವಿಡ್ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಉಪಕರಣಗಳನ್ನು ಒಳಗೊಂಡ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಒದಗಿಸುವಂತೆ ಡಿಹೆಚ್‌ಓ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕಾಲೇಜಿಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ಪಠ್ಯಗಳನ್ನು ಆನ್‌ಲೈನ್ ಮೂಲಕ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಮನೆಯಿಂದಲೇ ಊಟ ಮತ್ತು ಕುಡಿಯುವ ನೀರು ತಂದು ಬಳಸಬೇಕು. ತಮ್ಮ ವಸ್ತುಗಳನ್ನು ಇತರೆ ವಿದ್ಯಾರ್ಥಿಗಳೊಂದಿಗೆ ಹಂಚಿ ಕೊಳ್ಳದಂತೆ ತಿಳಿಸಿದ ಜಿಲ್ಲಾಧಿಕಾರಿ, ಯಾವುದೇ ವಿದ್ಯಾರ್ಥಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಾಲೇಜು ವತಿಯಿಂದ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ, ಪರೀಕ್ಷೆ ಮಾಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್ ವೈ., ಡಿಹೆಚ್‌ಓ ಡಾ.ಸುಧೀರ್‌ಚಂದ್ರ ಸೂಡಾ ಹಾಗೂ ಜಿಲ್ಲೆಯ ವಿವಿಧ ಸರಕಾರಿ/ಖಾಸಗಿ/ ಅನುದಾನಿತ/ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಕಾಲೇಜು ತರಗತಿ ಆರಂಭಕ್ಕೆ ಪ್ರಮುಖ ನಿಬಂಧನೆಗಳು

ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರದೊಂದಿಗೆ ಕಾಲೇಜು ತರಗತಿಗಳಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು.

ಕಾಲೇಜು ಆರಂಭದ ಕನಿಷ್ಠ 3 ದಿನಗಳ ಮುಂಚೆ ಎಲ್ಲಾ ಅಧ್ಯಾಪಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಪಡೆದಿರಬೇಕು.

ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸಂಪೂರ್ಣ ಸ್ಯಾನಟೈಸ್ ಮಾಡಬೇಕು. ಕಾಲೇಜುಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್‌ಶೀಲ್ಡ್ ಧರಿಸಬೇಕು. ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳನ್ನು ನಡೆಸುವಂತಿಲ್ಲ.

ಕೊಠಡಿಯಲ್ಲಿ ಸುರಕ್ಷತಾ ಅಂತರದಲ್ಲಿ ನಿಗದಿತ ಸಂಖ್ಯೆಯ ವಿದ್ಯಾರ್ಥಿ ಗಳಿಗೆ ಬೋಧನೆ ಮಾಡಬೇಕು. ಅವಶ್ಯವಿದ್ದಲ್ಲಿ ಹೆಚ್ಚುವರಿ ಕೊಠಡಿ ಬಳಕೆ ಮಾಡಿ ಕೊಳ್ಳಬೇಕು.

ಕಾಲೇಜಿನ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸ್ಯಾನಟೈಸರ್ ವ್ಯವಸ್ಥೆ ಮಾಡಬೇಕು. ಕಾಲೇಜಿನ ಶೌಚಾಲಯ ಗಳಲ್ಲಿ ಸ್ವಚ್ಛತೆಗೆ ಗರಿಷ್ಠ ಪ್ರಮಾಣದಲ್ಲಿ ಆದ್ಯತೆ ನೀಡಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News