ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಪಡುತೋನ್ಸೆ ಗ್ರಾಮ ಕೈಬಿಡಲು ಆಗ್ರಹ

Update: 2020-11-12 15:04 GMT

ಉಡುಪಿ, ನ.12: ಪಡುತೋನ್ಸೆ ಗ್ರಾಮವನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಿಂದ ಕೈ ಬಿಡಲು ಅಗತ್ಯದ ಕ್ರಮವಹಿಸಬೇಕು ಎಂದು ನ.11ರಂದು ಕೆಮ್ಮಣ್ಣು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣ ದಲ್ಲಿ ನಡೆದ ತೋನ್ಸೆ ಕೆಮ್ಮಣ್ಣು ಗ್ರಾಮ ಪಂಚಾಯತ್‌ನ 2020-21ನೆ ಸಾಲಿನ ಪ್ರಥಮ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಾರಿಯ ನೆರೆ ಸಂದರ್ಭದಲ್ಲಿ ಮಾಹಿತಿ ಕೊರತೆ ಸೇರಿದಂತೆ ಇತರ ಕಾರಣಗಳಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಸದ ಕುಟುಂಬಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ, ಪರಿಹಾರ ಒದಗಿಸಬೇಕು. ನೆರೆಯಿಂದ ಹಾನಿಯಾದ ಪಂಜರ ಮೀನು ಸಾಕಾಣಿಕೆ ಹಾಗೂ ಇತರ ಮೀನುಗಾರಿಕೆಯ ಸೊತ್ತುಗಳಿಗೆ ಪರಿಹಾರ ಒದಗಿಸಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

ಕೆಪ್ಪ ತೋಡಿಗೆ ಶಾಶ್ವತವಾದ ಅಣೆಕಟ್ಟು ನಿರ್ಮಿಸಬೇಕು. ಕೆಮ್ಮಣ್ಣು ಪಡು ಕುದ್ರು ಸಂಪರ್ಕದ ಹಳೆಯ ಮುರಿದು ಹೋದ ಸೇತುವೆಯನ್ನು ತೆರವು ಗೊಳಿಸ ಬೇಕು. ಹೂಡೆ ಸರಕಾರಿ ಉರ್ದು ಶಾಲೆಗೆ ತರಗತಿವಾರು ಶಿಕ್ಷಕರ ನೇಮಕ ಮಾಡಬೇಕು. ವಿದ್ಯಾರ್ಥಿ ವೇತನದ ಆದಾಯ ಮಿತಿಯನ್ನು ಹೆಚ್ಚಿಸಬೇಕು. ಮೆಸ್ಕಾಂ ಇಲಾಖೆಯು ವೋಲ್ಟೇಜ್ ಕಡಿಮೆ ಇರುವ ಪ್ರದೇಶಗಳನ್ನು ಪರಿ ಶೀಲಿಸಿ ಅಗತ್ಯವಿರುವಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸ ಬೇಕು ಎಂಬ ಬೇಡಿಕೆ ಗಳು ಸಭೆಯಲ್ಲಿ ಕೇಳಿಬಂದವು.

ಈ ಬಗ್ಗೆ ನಿರ್ಣಯ ಕೈಗೊಂಡು ಸೂಕ್ತ ಕ್ರಮವಹಿಸುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಆಡಳಿತಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಭರವಸೆ ನೀಡಿದರು. ಸಭೆಯಲ್ಲಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯೆ ಸುಲೋಚನಾ ಉಪಸ್ಥಿತರಿದ್ದರು.

ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೀಮಾ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಚಂದು, ಗ್ರಾಮ ಲೆಕ್ಕಾಧಿಕಾರಿ ರೇಷ್ಮಾ, ಮಹಿಳಾ ಶಕ್ತಿ ಕೇಂದ್ರದ ಅಧಿಕಾರಿ ಸುಷ್ಮಾ, ಸಖಿ ಕೇಂದ್ರದ ಸಮಾಲೋಚಕಿ ಸ್ಮಿತಾ, ಬ್ರಹ್ಮಾವರ ಶಿಕ್ಷಣ ಸಂಯೋಜಕ ನಾಗಾರ್ಜುನ, ಉಪನ್ಯಾಸಕ ಶ್ರೀಪತಿ ರಾವ್, ಮೀನುಗಾರಿಕಾ ಇಲಾಖೆಯ ಅಧಿಕಾರಿ ನಾರಾಯಣ, ಮೆಸ್ಕಾಂನ ಎಸ್.ಓ.ನವೀನ್ ಇಲಾಖಾ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಪಂ ನಿಕಟ ಪೂರ್ವ ಅಧ್ಯಕ್ಷೆ ಫೌಜಿಯಾ ಪರ್ವಿನ್, ಉಪಾಧ್ಯಕ್ಷೆ ಲತಾ, ಸದಸ್ಯರುಗಳಾದ ವೆಂಕಟೇಶ್ ಜಿ.ಕುಂದರ್, ನಿತ್ಯಾನಂದ ಕೆಮ್ಮಣ್ಣು, ಪಿ.ಗುರುರಾಜ ರಾವ್, ಮಾಲತಿ ಶ್ರೀಯಾನ್, ಮಹಮ್ಮದ್ ಇದ್ರೀಸ್, ಜೆನವೀಮ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಇಮ್ತಿಯಾಜ್ ಅವರನ್ನು ಸನ್ಮಾನಿಸಲಾಯಿತು. ಸಭೆಯ ನೋಡಲ್ ಅಧಿಕಾರಿ ಹೇಮಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ ಸ್ವಾಗತಿಸಿದರು. ಕಾರ್ಯದರ್ಶಿ ದಿನಕರ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News