ನ.26ರ ಅಖಿಲ ಭಾರತ ಮುಷ್ಕರ ಯಶಸ್ಸಿಗಾಗಿ ಕಾರ್ಮಿಕರ ಸಮಾವೇಶ

Update: 2020-11-13 14:56 GMT

ಮಂಗಳೂರು, ನ.13: ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆ ಗಳ ನೇತೃತ್ವದಲ್ಲಿ ನ.26ರಂದು ಅಖಿಲ ಭಾರತ ಮಹಾ ಮುಷ್ಕರ ನಡೆಯಲಿದ್ದು, ಅದರ ಯಶಸ್ವಿಗಾಗಿ ನಗರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶ ನಡೆಯಿತು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಒಳ್ಳೆಯ ದಿನಗಳು ಬರಲಿದೆ ಎಂದು ಜನತೆಗೆ ಮಂಕು ಬೂದಿ ಎರಚಿ ದೇಶದ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರವು ಹೆಜ್ಜೆಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನೇ ಮಾರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿಸದರು.

ರೈತರ ಭೂಮಿ ಪುನಃ ಬಹುರಾಷ್ಟ್ರೀಯ ಕಂಪೆನಿಗಳ ತೆಕ್ಕೆಗೆ ಹೋಗುವಂತಾಗಲು ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕ ವರ್ಗದ ಶಕ್ತಿಯನ್ನು ಕ್ಷೀಣಿಸಲು ಆಕ್ರಮಣಕಾರಿ ನೀತಿಗಳನ್ನು ಜಾರಿಗೊಳಿಸಿ ಕಾರ್ಮಿಕರು ಸಂಘಟಿತರಾಗದಂತೆ ಆಳುವ ವರ್ಗಗಳು ಪಿತೂರಿ ನಡೆಸುತ್ತಿವೆ. ಇವೆಲ್ಲದರ ವಿರುದ್ಧ ಕಾರ್ಮಿಕ ವರ್ಗ ಸಮರಶೀಲ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಎಐಟಿಯುಸಿ ಜಿಲ್ಲಾ ನಾಯಕ ಸೀತಾರಾಮ ಬೇರಿಂಜ ಮಾತನಾಡಿ, ಆತ್ಮನಿರ್ಭರದ ಹೆಸರಿನಲ್ಲಿ ಎಲ್ಲ ಕ್ಷೇತ್ರಗಳನ್ನು ಸಂಪೂರ್ಣ ಖಾಸಗೀಕರಣ ಗೊಳಿಸಿ ಇಡೀ ದೇಶವನ್ನೇ ಮಾರಲು ಹೊರಟ ನರೇಂದ್ರ ಮೋದಿ ಸರಕಾರ ನಿಜಕ್ಕೂ ದೇಶದ್ರೋಹಿಯಾಗಿದೆ. ಮಾತೆತ್ತಿದ್ದರೆ ದೇಶಪ್ರೇಮದ ಬಗ್ಗೆ ಮಾತನಾಡುವವರು, ಜನರ ಭಾವನೆಗಳನ್ನು ಕೆರಳಿಸಿ ಜಾತಿ ಧರ್ಮದ ಹೆಸರಿನಲ್ಲಿ ಕಪಟ ರಾಜಕೀಯ ನಡೆಸಿ ದೇಶವನ್ನೇ ಅದಾನಿ- ಅಂಬಾನಿಗಳ ಕೈಗೊಪ್ಪಿಸಲು ಖಾಸಗೀಕರಣದ ಮಂತ್ರ ಜಪಿಸುತ್ತಿದ್ದಾರೆ ಎಂದು ಹೇಳಿದರು.

ಬ್ಯಾಂಕ್ ನೌಕರರ ರಾಷ್ಟ್ರೀಯ ನಾಯಕ ವಿನ್ಸೆಂಟ್ ಡಿಸೋಜ, ವಿಮಾ ನೌಕರರ ಜಿಲ್ಲಾ ಮುಖಂಡ ರಾಘವೇಂದ್ರ ರಾವ್, ಸಾರಿಗೆ ನೌಕರರ ರಾಜ್ಯ ಮುಖಂಡ ಪ್ರವೀಣ್‌ಕುಮಾರ್ ಮಾತನಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ಎಐಟಿಯುಸಿ ಜಿಲ್ಲಾಧ್ಯಕ್ಷ ಬಿ.ಶೇಖರ್, ಎಐಸಿಸಿಟಿಯು ಜಿಲ್ಲಾ ನಾಯಕ ಸತೀಶ್ ಕುಮಾರ್ ಅವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿ ಸಮಾವೇಶವನ್ನು ನಡೆಸಿಕೊಟ್ಟಿತು.

ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News