ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: ಸರಕಾರದ ಮಧ್ಯಪ್ರವೇಶಕ್ಕೆ ಕಾರ್ಮಿಕರ ಒತ್ತಾಯ

Update: 2020-11-14 11:41 GMT

ಬೆಂಗಳೂರು, ನ. 14: ಬಿಡದಿಯ ಟೊಯೊಟಾ ಕಿರ್ಲೋಸ್ಕರ್(ಟಿಕೆಎಂ) ಕಾರ್ಖಾನೆ ದಿಢೀರ್ ಬೀಗಮುದ್ರೆ (ಲಾಕ್‍ಔಟ್) ಹಾಕಿರುವುದನ್ನು ಹಿಂಪಡೆಯಬೇಕು. ಕಾರ್ಮಿಕರ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು. ಮಲಮೂತ್ರ ವಿಸರ್ಜನೆಗೆ ತೆರಳಲು ಅವಕಾಶವಿಲ್ಲದೆ ಅಮಾನವೀಯವಾಗಿ ದುಡಿಸಿಕೊಳ್ಳುವ ಒತ್ತಡ ತಂತ್ರ ಮತ್ತು ಕಿರುಕುಳ ನಿಲ್ಲಿಸಬೇಕೆಂದು ಆಗ್ರಹಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಆರನೆ ದಿನಕ್ಕೆ ಕಾಲಿಟ್ಟಿದೆ.

ಶನಿವಾರವೂ ಕಾರ್ಮಿಕರ ಹೋರಾಟ ಮುಂದುವರಿದಿದ್ದು, ಎಡಪಕ್ಷಗಳ ಕಾರ್ಮಿಕ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಕನ್ನಡಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಬಿಕ್ಕಟ್ಟಿನ ಪರಿಹಾರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಧ್ಯಪ್ರವೇಶ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ನಾವೇನು ಗುಲಾಮರೇ..?: `ಜಪಾನ್ ಮೂಲದ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿನ ಕೆಲವರ ವೈಯಕ್ತಿಕ ಹಿತಕ್ಕಾಗಿ ಕಾರ್ಮಿಕರನ್ನು ಜೀತದಾಳುಗಳು, ಗುಲಾಮರಿಗಿಂತಲೂ ಅತ್ಯಂತ ಕೀಳಾಗಿ ದುಡಿಸಿಕೊಳ್ಳಲಾಗುತ್ತಿದೆ. ಕನಿಷ್ಠ ಪಕ್ಷ ಮಲಮೂತ್ರ ವಿಸರ್ಜನೆಗೂ ತೆರಳಲು ಸಮಯಾವಕಾಶ ನೀಡದೆ ದುಡಿಸಿಕೊಳ್ಳುವುದು ಎಂದರೆ ಇವರಿಗೆ ಮನುಷ್ಯತ್ವವಿದೆಯೇ? ಕಾರ್ಮಿಕರೇನು ಯಂತ್ರಗಳೇ?' ಎಂದು ಪ್ರತಿಭಟನಾನಿರತ ಕಾರ್ಮಿಕರ ಪ್ರಶ್ನೆಯಾಗಿದೆ.

`ವಾರ್ತಾಭಾರತಿ' ಪತ್ರಿಕೆಯೊಂದಿಗೆ ಮಾತನಾಡಿದ ಟಿಕೆಎಂ ಕಾರ್ಮಿಕ ಸಂಘದ ಜಂಟಿ ಕಾರ್ಯದರ್ಶಿ ಎಂ.ಎನ್.ಗಂಗಾಧರ್, `ಇಲ್ಲಿನ ಬಿಡದಿ ಟೊಯೊಟಾ ಕಾರ್ಖಾನೆಯಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದು ಕಾರು ಉತ್ಪಾದನೆ ಆಗುತ್ತದೆ. ಅಂದರೆ ಕಾರ್ಮಿಕರ ಕೆಲಸದ ಒತ್ತಡ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿ. ಇದೀಗ ಆ ಸಮಯವನ್ನು ಎರಡೂವರೆ ನಿಮಿಷಕ್ಕೆ ಇಳಿಸಲಾಗುತ್ತಿದೆ. ಈ ಒತ್ತಡದ ಪರಿಣಾಮ ಕಾರ್ಮಿಕರಿಗೆ ಕತ್ತು, ಬೆನ್ನು, ರಟ್ಟೆ ನೋವು ಸೇರಿದಂತೆ ತೀವ್ರ ಸ್ವರೂಪದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಕನಿಷ್ಠ ಪಕ್ಷ ನೀರು ಕುಡಿಯಲು, ಶೌಚಾಲಯಕ್ಕೂ ತೆರಳಲು ಅವಕಾಶವಿಲ್ಲದ ರೀತಿಯಲ್ಲಿ ದುಡಿಯಬೇಕು ಎಂದರೆ ಸಾಧ್ಯವೇ?

ಕೊರೋನ ಸಂದರ್ಭದಲ್ಲಿಯೂ ಉತ್ಪಾದನೆ ನಿಲ್ಲಿಸದೆ ಜೀವದ ಹಂಗನ್ನು ತೊರೆದು ಕಾರ್ಮಿಕರು ದುಡಿದಿದ್ದಾರೆ. ಆ ಬಳಿಕವೂ ಕಾರ್ಮಿಕರ ಮೇಲಿನ ಕೆಲಸದ ಒತ್ತಡ ಮತ್ತಷ್ಟು ಹೆಚ್ಚಿದ್ದು, ಬಿಕ್ಕಟ್ಟು ಸೃಷ್ಟಿಸಿದೆ. ಆಡಳಿತ ಮಂಡಳಿ, ಕಾರ್ಮಿಕ ಸಂಘದ ಜತೆ ಯಾವುದೇ ರೀತಿಯ ಚರ್ಚೆಗೆ ಸಿದ್ದವಿಲ್ಲ. ಅವರು ಹೇಳಿದ್ದೆ ಇಲ್ಲಿ ಕಾನೂನು. ಪ್ರಶ್ನಿಸಿದರೆ ನೋಟಿಸ್, ಏಕಪಕ್ಷೀಯವಾಗಿ ಅಮಾನತು ಮಾಡುವುದು ಎಂದರೆ, ಕಾರ್ಮಿಕರು ಗುಲಾಮರಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ನ.9ರಂದು ಏಕಾಏಕಿ ಕಾರ್ಮಿಕರೊಬ್ಬರ ಅಮಾನತು ಖಂಡಿಸಿ ಶಾಂತ ರೀತಿಯಲ್ಲಿ ಕಾರ್ಮಿಕರು ಪ್ರತಿಭಟನೆಗೆ ಮುಂದಾಗಿದ್ದರು. ಕಾರ್ಮಿಕ ಸಂಘ ಯಾವುದೇ ಮುಷ್ಕರ ಪ್ರಕಟಿಸಿಲ್ಲ. ಆದರೂ, ಆಡಳಿತ ಮಂಡಳಿ ದಿಢೀರ್ ಕಾರ್ಖಾನೆ `ಬೀಗಮುದ್ರೆ' ಘೋಷಣೆ ಮಾಡಿದೆ. ಈ ಮಧ್ಯೆ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು `ಅಶಿಸ್ತು' ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಎರಡು ವರ್ಷಗಳಿಂದಲೂ ಕಾರ್ಖಾನೆಯಲ್ಲಿ ಕಾರ್ಮಿಕರ ಶೋಷಣೆ ಹೇಳಲು ಸಾಧ್ಯವಿಲ್ಲ' ಎಂದು ಗಂಗಾಧರ್ ಹೇಳಿದರು.

`ಕಾರ್ಖಾನೆಯಲ್ಲಿ ಒಟ್ಟು 3,500 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ನಾವು ಮನುಷ್ಯರು. ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಕಾರ್ಖಾನೆಯ ಉನ್ನತಿಗಾಗಿ ಕೆಲಸ ಮಾಡಲು ನಾವು ಸದಾ ಸಿದ್ಧ. ಆದರೆ, ನಾವು ಗುಲಾಮರಲ್ಲ. ಮನಸೋ ಇಚ್ಛೆ ಸ್ವಯಂ ನಿವೃತ್ತಿ ನೀಡುವ ಪ್ರವೃತ್ತಿ ನಿಲ್ಲಿಸಬೇಕು. ಒತ್ತಡ ತಂತ್ರ ಮತ್ತು ಶೋಷಣೆ ನಿಲ್ಲಿಸಬೇಕು. ಕ್ಷುಲ್ಲಕ ಕಾರಣಕ್ಕೆ ವೇತನ ಕಡಿತವನ್ನು ಕೈಬಿಡಬೇಕು ಎಂದು ಗಂಗಾಧರ್ ಒತ್ತಾಯಿಸಿದರು.

ಹೋರಾಟ ನಿಲ್ಲದು: `ಕಾರ್ಖಾನೆ ಬೀಗಮುದ್ರೆ ತೆರವು, ಕಾರ್ಮಿಕರ ಅಮಾನತು ಆದೇಶ ಹಿಂಪಡೆಯಬೇಕು. ಕಾರ್ಮಿಕರು ಮತ್ತು ಕಾರ್ಮಿಕರ ಸಂಘಕ್ಕೆ ಗೌರವ ನೀಡಬೇಕು. ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ಮತ್ತು ಕಾರ್ಮಿಕರ ಮಧ್ಯೆ ಬಿಕ್ಕಟ್ಟು ಪರಿಹರಿಸಬೇಕು. ಕೆಲಸದ ಒತ್ತಡ, ಶೋಷಣೆ ನಿಲ್ಲಿಸುವುದು ಸೇರಿದಂತೆ ಕಾರ್ಮಿಕರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಿಲ್ಲದು'

-ಎಂ.ಎನ್.ಗಂಗಾಧರ್, ಟಿಕೆಎಂ ಕಾರ್ಮಿಕ ಸಂಘದ ಜಂಟಿ ಕಾರ್ಯದರ್ಶಿ

ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದು ಕಾರು ಉತ್ಪಾದನೆಯಾಗುತ್ತಿದ್ದು, ಇದೀಗ ಎರಡೂವರೆ ನಿಮಿಷಕ್ಕೆ ಒಂದು ಕಾರು ಉತ್ಪಾದನೆ ಆಗಬೇಕೆಂದು ಕಾರ್ಮಿಕರ ಮೇಲೆ ಒತ್ತಡ ಹೇರುವುದಲ್ಲದೆ, ಅಮಾನವೀಯ ರೀತಿಯಲ್ಲಿ ಶೋಷಣೆ ಮಾಡಲಾಗುತ್ತಿದೆ. ಕನಿಷ್ಟ ನೀರು ಕುಡಿಯಲು, ಮಲಮೂತ್ರ ವಿಸರ್ಜನೆಗೆ ತೆರಳಲು ಅವಕಾಶವಿಲ್ಲದ ರೀತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದ್ದು, ಇದು ನಿಲ್ಲಬೇಕು.’

-ಪ್ರತಿಭಟನಾನಿರತ ಕಾರ್ಮಿಕ, ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News