'ಕಾರ್ಮಿಕ ಭವನ ಸ್ಥಳಾಂತರ'ಕ್ಕೆ ಕಾರ್ಮಿಕರ ತೀವ್ರ ಆಕ್ಷೇಪ

Update: 2020-11-15 12:44 GMT

ಬೆಂಗಳೂರು, ನ. 15: ನಗರದ ಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ಕೆಲಸ ಮಾಡುತ್ತಿರುವಂತಹ ಅಧಿಕಾರಿಗಳ ಹಾಗೂ ನಿರೀಕ್ಷಕರ ಕಚೇರಿಯನ್ನು ತುಮಕೂರು ರಸ್ತೆಯಲ್ಲಿನ ಬಾಗಲಗುಂಟೆಗೆ ಸ್ಥಳಾಂತರ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ತೀರ್ಮಾನಕ್ಕೆ ಅಸಂಘಟಿತ ಕಾರ್ಮಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರು ವಾಸ ಮಾಡುತ್ತಿದ್ದು, ಅವರಿಗೆ ಸರಕಾರದಿಂದ ಅನೇಕ ಸೌಲಭ್ಯಗಳು ನೀಡಲಾಗುತ್ತಿದೆ. ಅವುಗಳನ್ನು ಪಡೆಯಲು ಕಾರ್ಮಿಕರು ಕಾರ್ಮಿಕ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲು ಸಾಧ್ಯವಾಗುತ್ತದೆ. ಆದರೆ, ಇದನ್ನು ಬಾಗಲಗುಂಟೆಗೆ ಸ್ಥಳಾಂತರಿಸಿದರೆ ಈ ಭಾಗದ ಕಾರ್ಮಿಕರು 40 ಕಿ.ಮೀ. ದೂರ ಹೋಗಬೇಕಾಗುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ಕಚೇರಿಯನ್ನು ಸ್ಥಳಾಂತರ ಮಾಡಬಾರದು ಎಂದು ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾರ್ಮಿಕ ಸಂಘಟನೆಯ ಮುಖಂಡ ವಿಜಯ್ ಆಗ್ರಹಿಸಿದ್ದಾರೆ.

ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಅಂತಹ ಸಂದರ್ಭದಲ್ಲಿ ಸರಕಾರದ ಸೌಲಭ್ಯವನ್ನಾದರೂ ಪಡೆಯಬೇಕು ಎಂದರೆ ನೋಂದಣಿ ಮಾಡಿಕೊಳ್ಳಬೇಕು. ಅದಕ್ಕಾಗಿ ಹಲವು ದಾಖಲೆಗಳನ್ನು ಕಚೇರಿಗೆ ನೀಡಬೇಕಾಗುತ್ತದೆ. ಇಂತಹ ಕಷ್ಟದ ಸಂದರ್ಭದಲ್ಲಿ 35 ರಿಂದ 40 ಕಿ.ಮೀ.ಓಡಾಡಲೂ ಕಾರ್ಮಿಕರಿಗೆ ಅನಾನುಕೂಲವಾಗುತ್ತದೆ ಎಂದು ವಿಜಯ್ ಅಭಿಪ್ರಾಯಿಸಿದ್ದಾರೆ.

ಈ ಸಂಬಂಧ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೂ, ಈ ಕುರಿತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಪತ್ರ ಬರೆದಿದ್ದು, ಕಚೇರಿ ಸ್ಥಳಾಂತರಿಸಬಾರದು ಎಂದು ಮನವಿ ಮಾಡಲಾಗಿದೆ. ಕಾರ್ಮಿಕರಿಗೆ ಆಗಲಿರುವ ಸಮಸ್ಯೆ ಮನಗಂಡಿರುವ ಕಂದಾಯ ಸಚಿವ ಆರ್.ಅಶೋಕ್ ಮತ್ತು ಜಯನಗರ ಶಾಸಕಿ ಸೌಮ್ಯಾರೆಡ್ಡಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಪತ್ರ ಬರೆದಿದ್ದು, ಕಚೇರಿ ಸ್ಥಳಾಂತರಿಸಬಾರದು ಎಂದು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News