ಕೊಂಕಣ ರೈಲಿನಲ್ಲಿ ಕಳವು ಪ್ರಕರಣ : ಆರೋಪಿ ಸೆರೆ
ಉಡುಪಿ, ನ.15: ‘ಮಂಗಳಾ ಎಕ್ಸ್‌ಪ್ರೆಸ್’ನಲ್ಲಿ ಉಡುಪಿಯಿಂದ ಮುಂಬೈಗೆ ಪ್ರಯಾಣಿಸುತಿದ್ದ ಮಹಿಳೆಯೊಬ್ಬರ ಬೆಲೆಬಾಳುವ ಸೊತ್ತುಗಳಿದ್ದ ಹ್ಯಾಂಡ್‌ಬ್ಯಾಗ್‌ನ್ನು ಕಳವು ಮಾಡಿದ್ದ ಕೇರಳ ಮೂಲದ ಕಳವು ಆರೋಪಿಯನ್ನು ಕೊಂಕಣ ರೈಲ್ವೆಯ ರೈಲ್ವೆ ಸುರಕ್ಷಾ ದಳದ (ಆರ್‌ಪಿಎಫ್) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ 2.2 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಕಣ್ಣೂರಿನ ನಿಖಿಲ್ ಕುಮಾರ್ ಎಂದು ಗುರುತಿಸಲಾಗಿದೆ.
ಉಡುಪಿಯ ವನಿತಾ ದಿವಾಕರ ಶೆಟ್ಟಿ ಅವರು ನ.13ರಂದು ರೈಲು ನಂ. 02617 ಮಂಗಳಾ ಎಕ್ಸ್‌ಪ್ರೆಸ್‌ನ ಎ.1 ಕೋಚ್‌ನ ಬರ್ತ್ ನಂ.8 ಮತ್ತು 10ರಲ್ಲಿ ಉಡುಪಿಯಿಂದ ಮುಂಬೈಗೆ ಪ್ರಯಾಣಿಸುತಿದ್ದು, ಅಮೂಲ್ಯ ಸೊತ್ತುಗಳಿದ್ದ ತನ್ನ ಹ್ಯಾಂಡ್‌ಬ್ಯಾಗ್‌ನ್ನು ಕಳವು ಮಾಡಿರುವುದಾಗಿ ಕರ್ತವ್ಯದಲ್ಲಿದ್ದ ಟಿಟಿಇಗೆ ದೂರು ನೀಡಿದ್ದರು.
ಮಾಹಿತಿ ಪಡೆದ ತಕ್ಷಣ ಕಾರ್ಯೋನ್ಮುಖರಾದ ಮಾರ್ಗೋವಾ ರೈಲ್ವೆ ಸುರಕ್ಷಾ ಪಡೆಯ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್, ಎಲ್ಲಾ ಸಿಸಿಟಿವಿಯನ್ನು ಪರಿಶೀಲಿಸಿದಾಗ, ರೈಲು ಬರುವ ಸಮಯದಲ್ಲಿ ಪ್ಲಾಟ್‌ಫಾರಂ ನಲ್ಲಿ ಬಣ್ಣದ ಕ್ಯಾಪ್ ಧರಿಸಿದ ಸಂಶಯಾಸ್ಪದ ವ್ಯಕ್ತಿಯೊಬ್ಬನನ್ನು ಗುರುತಿಸಿದ್ದು, ಆತನ ಪೋಟೊವನ್ನು ವಾಟ್ಸಪ್ ಮೂಲಕ ಆರ್‌ಪಿಎಫ್ ಗ್ರೂಪ್‌ಗೆ ಕಳುಹಿಸಿದ್ದರು.
ಇದೇ ಬಣ್ಣದ ಕ್ಯಾಪ್ ಧರಿಸಿದ್ದ ವ್ಯಕ್ತಿಯನ್ನು ಕಾರವಾರದ ಕಾನ್‌ಸ್ಟೇಬಲ್ ವಿನಾಯಕ ಆರ್.ಡಿ. ಅವರು ನ.14ರಂದು ಗುರುತಿಸಿ ವಶಕ್ಕೆ ಪಡೆದು ಮತ್ತೊಂದು ರೈಲಿನಲ್ಲಿ ಕಾರವಾರದಿಂದ ಮಾರ್ಗೋವಾಕ್ಕೆ ಕರೆ ತರಲಾಯಿತು. ವಿಚಾರಣೆ ವೇಳೆ ಆತನಿಂದ ಕಳವು ಮಾಡಿರುವ ಹ್ಯಾಂಡ್ ಬ್ಯಾಗ್‌ನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿ ಚಿನ್ನದ ಬಳೆ, ಚಿನ್ನದ ಕರಿಮಣಿ, ಮೊಬೈಲ್, ಕೀಬಂಚ್, ಆಧಾರ ಕಾರ್ಡ್, ಎಟಿಎಂ ಕಾರ್ಡ್, ಮೆಡಿಕ್ಲೈಮ್ ಕಾರ್ಡ್, 6000ರೂ.ನಗದು ಸೇರಿ ಒಟ್ಟು 2.20 ಲಕ್ಷ ರೂ.ಮೌಲ್ಯದ ಸೊತ್ತು ಇದ್ದ ರೀತಿಯಲ್ಲೇ ಪತ್ತೆಯಾಯಿತು.
ಹ್ಯಾಂಡ್‌ಬ್ಯಾಗ್‌ನ್ನು ಕಳವು ಮಾಡಿದ ಬಳಿಕ ಆತ ರೈಲು ಕ್ರಾಸಿಂಗ್‌ಗಾಗಿ ನಿಂತಿದ್ದಾಗ ಅದರಿಂದ ಇಳಿದು, ಕೇರಳದತ್ತ ಪ್ರಯಾಣಿಸುತಿದ್ದ ಎಂದು ರೈಲ್ವೆ ಸುರಕ್ಷಾ ಪಡೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೀಗ ವಿಚಾರಣೆಗಾಗಿ ಆತನನ್ನು ಕೊಂಕಣ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.