ನ. 20: ಇನ್ಸ್ ಪೆಕ್ಟರ್ ಕೆ.ಎಂ.ರಫೀಕ್ ರಿಗೆ 'ಮುಖ್ಯಮಂತ್ರಿಗಳ ಚಿನ್ನದ ಪದಕ' ಪ್ರದಾನ

Update: 2020-11-17 13:52 GMT

ಬಂಟ್ವಾಳ : ಮೂಲತಃ ವಿಟ್ಲ ಸಮೀಪದ ಕೆಲಿಂಜ ನಿವಾಸಿ, ಬೆಂಗಳೂರು ವಿವೇಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ. ಅವರಿಗೆ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆಗಾಗಿ ನ.20ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಸರಕಾರ ಕೊಡಮಾಡುವ 'ಮುಖ್ಯಮಂತ್ರಿಗಳ ಚಿನ್ನದ ಪದಕ' ಪ್ರದಾನ ಮಾಡಲಿದ್ದಾರೆ.

ವಿಟ್ಲ ಸಮೀಪದ ಕೆಲಿಂಜ ನಿವಾಸಿ ಅಬ್ದುಲ್ ಖಾದರ್ ಹಾಗೂ ನೆಬಿಸ ದಂಪತಿ ಪುತ್ರರಾಗಿರುವ ರಫೀಕ್ ಕೆ.ಎಂ. ಅವರ 15 ವರ್ಷದ ಪೊಲೀಸ್ ವೃತ್ತಿಯ ಪ್ರಾರಂಭದಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಆರಂಭಿಸಿದರು. ನಂತರ ನಂಜನಗೂಡು, ಪಿರಿಯಾಪಟ್ಟಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಪಡೆದರು. 5 ವರ್ಷದ ಹಿಂದೆ ಮುಂಭಡ್ತಿ ಪಡೆದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಇನ್ಸ್ ಪೆಕ್ಟರ್ ಆದರು. ಬಳಿಕ ಪಣಂಬೂರು ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ದೀಪಕ್ ರಾವ್ ರನ್ನು ಹತ್ಯೆಗೈದ  ಆರೋಪಿಗಳನ್ನು  ಬೆನ್ನೆತ್ತಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದು ಅವರ ಸಾಮರ್ಥ್ಯವನ್ನು ದೊಡ್ಡ ಮಟ್ಟದಲ್ಲಿ ರಾಜ್ಯಕ್ಕೆ ಪರಿಚಯಿಸಿತ್ತು. ಆ ಬಳಿಕ ಬೆಂಗ್ರೆಯ ಕೋಮು ಸಂಘರ್ಷ ಸ್ಥಿತಿಯನ್ನು ತನ್ನ ಚಾಣಾಕ್ಷ್ಯ ನಿಲುವಿನಿಂದ ಅವರು ತಹಬಂದಿಗೆ ತಂದಿದ್ದರು. ರೇಪ್ ಕೇಸ್ ಜಾಲವನ್ನು ಬೇಧಿಸಿ ಸಮಾಜದ ಗಮನ ಸೆಳೆದರು. ತನ್ನ ವೃತ್ತಿ ಜೀವನದಲ್ಲಿ ಹತ್ತು ಹಲವು ಕೇಸುಗಳನ್ನು ಮಟ್ಟಹಾಕಿ ತಪ್ಪಿತಸ್ಥರ ಪಾಲಿಗೆ ಸಿಂಹಸ್ವಪ್ನರಾದ ಕೀರ್ತಿ ಇವರಿಗಿದೆ.

ಪ್ರಸ್ತುತ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ವಿವೇಕನಗರದ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೋವಿಡ್19 ಲಾಕ್ ಡೌನ್ ಸಂದರ್ಭದಲ್ಲಿ ಅತಂತ್ರರಾಗಿದ್ದ ನೂರಾರು ಹೊರರಾಜ್ಯದ ಕಾರ್ಮಿಕರು, ವಲಸಿಗರು, ಬಿಕ್ಷುಕರು, ಅಶಕ್ತರಿಗೆ ದಿನನಿತ್ಯ ಎರಡು ಹೊತ್ತಿನ ಊಟವನ್ನು ರಫೀಕ್ ಕೆ.ಎಂ. ಅವರ ನೇತೃತ್ವದಲ್ಲಿ ವಿವೇಕನಗರ ಠಾಣೆಯಲ್ಲಿ ನೀಡುತ್ತಿದ್ದುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ರಫೀಕ್ ಅವರು ಮಂಗಳೂರಿನ ಸಾಮಾಜಿಕ ಸಂಸ್ಥೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ಗೌರವಾನ್ವಿತ ಸದಸ್ಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News