ಉಡುಪಿ: ಕಾಲೇಜು ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

Update: 2020-11-17 15:10 GMT

ಉಡುಪಿ, ನ.17: ಎಂಟು ತಿಂಗಳ ‘ಕೊರೋನ ರಜೆ’ಯ ಬಳಿಕ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಾದ್ಯಂತ ಪ್ರಥಮ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಅಂತಿಮ ವರ್ಷದ ತರಗತಿಗಳು ಪ್ರಾರಂಭಕ್ಕೆ ಇಂದು ಮುಹೂರ್ತ ನಡೆಯಿತಾದರೂ, ಕೇವಲ ಹತ್ತಾರು ವಿದ್ಯಾರ್ಥಿಗಳು ಮಾತ್ರ ಮೊದಲ ದಿನ ‘ತರಗತಿ’ಗಳಿಗೆ ಹಾಜರಾದರು ಎಂದು ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದ ವರದಿಗಳು ತಿಳಿಸಿವೆ.

ಕೊರೋನ ನಿಯಂತ್ರಣದ ಹಿನ್ನೆಲೆಯಲ್ಲಿ ದೇಶಾದ್ಯಂತ ಘೋಷಿಸಲಾದ ಲಾಕ್‌ಡೌನ್ ವೇಳೆ ಮುಚ್ಚಿದ ಕಾಲೇಜುಗಳು ಇಂದು ಅಧಿಕೃತವಾಗಿ ಬಾಗಿಲು ತೆರೆದವು. ಕೇವಲ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ‘ಕೊರೋನ ಮಾರ್ಗ ಸೂಚಿಗಳ ಕಡ್ಡಾಯ ಪಾಲನೆ’ಯೊಂದಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿತ್ತು.

ತರಗತಿಗಳಲ್ಲಿ ಕುಳಿತು ಪಾಠ ಕೇಳಲು ಕೋವಿಡ್-19 ಪರೀಕ್ಷೆಗೊಳಪಟ್ಟು ನೆಗೆಟಿವ್ ವರದಿಯೊಂದಿಗೆ ವಿದ್ಯಾರ್ಥಿಯ ಹೆತ್ತವರ ಅನುಮತಿ ಪತ್ರವನ್ನು ಕಡ್ಡಾಯಗೊಳಿಸಿದ್ದರಿಂದ ಇಂದು ತೀರಾ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ಒಳಗೆ ಕಾಲಿಟ್ಟರು. ಅದರಲ್ಲೂ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ, ಸರಕಾರಿ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಂಡುಬಂದರು.

ಇದಕ್ಕೆ ಸರಕಾರಿ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆಗೆ ಅವಕಾಶ ನೀಡಿರುವುದೂ ಒಂದು ಕಾರಣವಾಗಿತ್ತು. ಆದರೆ ಖಾಸಗಿ ಕಾಲೇಜುಗಳಲ್ಲಿ ಹೆತ್ತವರ ಅನುಮತಿ ಪತ್ರದೊಂದಿಗೆ ಕೊರೋನ ಪರೀಕ್ಷೆಗೊಳಗಾಗಿ ಪಡೆದ ನೆಗೆಟಿವ್ ವರದಿಯನ್ನು ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಜಿಲ್ಲಾಡಳಿತ ಸೂಚಿಸಿರುವ ನಿಯಮಾವಳಿಯಂತೆ ಸ್ವಚ್ಛತೆ, ಮಾಸ್ಕ್, ಸುರಕ್ಷಿತಾ ಅಂತರ ಪಾಲನೆಗೆ ಎಲ್ಲ ಕಾಲೇಜುಗಳೂ ಗರಿಷ್ಟ ಆದ್ಯತೆ ನೀಡಿದ್ದವು.

ಈಗಾಗಲೇ ಆನ್‌ಲೈನ್‌ನಲ್ಲಿ ಕ್ಲಾಸ್‌ಗಳು ನಡೆಯುತ್ತಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಅದರಲ್ಲೇ ಮುಂದುವರಿಯಲು ಬಯಸಿದ್ದಾರೆ ಎಂದು ಹೆಚ್ಚಿನ ಕಾಲೇಜುಗಳ ಪ್ರಾಂಶುಪಾಲರು ತಿಳಿಸಿದರು. ಅನಾರೋಗ್ಯ ಹಾಗೂ ಕೊರೋನ ನೆಗೆಟಿವ್ ವರದಿಯಿಲ್ಲದೆ ವಿದ್ಯಾರ್ಥಿಗಳಿಗೆ ಕಾಲೇಜು ಗಳೊಳಗೆ ಪ್ರವೇಶ ವಿರದ ಕಾರಣ ಇಂದು ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸಲಿಲ್ಲ ಎಂದು ಅವರು ನುಡಿದರು.

ಹೆಚ್ಚಿನ ವಿದ್ಯಾರ್ಥಿಗಳು ಕೋವಿಡ್ ವರದಿ ಪಡೆದು ನಾಳೆ-ನಾಡಿದ್ದು ಕಾಲೇಜುಗಳಿಗೆ ಬರುವ ನಿರೀಕ್ಷೆ ಇದೆ ಎಂದು ‘ವಾರ್ತಾಭಾರತಿ’ ಮಾತನಾಡಿಸಿದ ಉಡುಪಿಯ ಎಂಜಿಎಂ ಹಾಗೂ ಪೂರ್ಣಪ್ರಜ್ಞ ಕಾಲೇಜುಗಳ ಪ್ರಾಂಶುಪಾಲರು ಆಶಾವಾದ ವ್ಯಕ್ತಪಡಿಸಿದರು. ಕಾಲೇಜಿನಲ್ಲಿ ಜಿಲ್ಲಾಡಳಿತ ನೀಡಿರುವ ಎಲ್ಲ ಕ್ರಮಗಳನ್ನು ಪಾಲಿಸಲಾಗಿದೆ. ಪ್ರವೇಶದ್ವಾರದ ಬಳಿಯೇ ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಾಯಿತು ಎಂದವರು ನುಡಿದರು.

ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳನ್ನು ಮುಂದುವರಿಸಲು ಸರಕಾರ ಅನುಮತಿ ನೀಡಿರುವುದರಿಂದ, ಹೆತ್ತವರ ಒತ್ತಾಸೆಯೂ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ನಿರ್ಧರಿಸಿದ್ದಾರೆ. ನಗರದ ಸರಕಾರಿ ಮಹಿಳಾ ಕಾಲೇಜು ಹಾಗೂ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ.50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಕಾಲೇಜಿಗೆ ಹಾಜರಾಗಿದ್ದರೂ ಅವರಿಗೆ ಕೋವಿಡ್ ಪರೀಕ್ಷೆಗೊಳಪಡಿಸಿ ಮನೆಗೆ ಕಳುಹಿಸಲಾಗಿದೆ ಎಂದು ಆಯಾ ಕಾಲೇಜುಗಳ ಮುಖ್ಯಸ್ಥರು ತಿಳಿಸಿದರು.

ಕಾಲೇಜಿನಲ್ಲಿ ಪರೀಕ್ಷೆ: ಜಿಲ್ಲೆಯ ಎಲ್ಲಾ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೆ ಜಿಲ್ಲಾಡಳಿತದ ವತಿಯಿಂದ ಆರೋಗ್ಯ ಇಲಾಖೆಯ ಪಿಪಿಇ ಕಿಟ್ ಧರಿಸಿದ ಸಿಬಂದಿಗಳು ಕೊರೊನಾ ತಪಾಸಣೆ ನಡೆಸಿದರು. ಇದರೊಂದಿಗೆ ಕಾಲೇಜುಗಳ ಪ್ರಾದ್ಯಾವಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಕೊರೋನ ಪರೀಕ್ಷೆಯೂ ಇಂದು ಆಯಾ ಕಾಲೇಜುಗಳಲ್ಲಿ ನಡೆಯಿತು. ಇಂದು ನಡೆಸಲಾದ ಪರೀಕ್ಷಾ ವರದಿ ಮುಂದಿನ 2-3 ದಿನಗಳಲ್ಲಿ ಬರುವ ಸಾಧ್ಯತೆಗಳಿವೆ. ಅಲ್ಲಿಯವರೆಗೆ ಅವರಿಗೆ ಪ್ರವೇಶಾತಿ ಇರುವುದಿಲ್ಲ. ಮಂಗಳವಾರ ಆಗಮಿಸದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮುಂದಿನ ಕೆಲದಿನಗಳವರೆಗೆ ಮಾಡಲಾಗುವುದು ಎಂದು ಕಾಲೇಜುಗಳ ಪ್ರಾಂಶುಪಾಲರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News