ಬೆಂಗಳೂರು: ಕಾರ್ಯಾಚರಣೆ ಆರಂಭಿಸಿದ ಅಕ್ರಮ ವಲಸಿಗರ ದಿಗ್ಬಂಧನ ಕೇಂದ್ರ

Update: 2020-11-17 17:46 GMT

ಬೆಂಗಳೂರು: ಅಕ್ರಮ ವಲಸಿಗರಿಗಾಗಿ ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ನೆಲಮಂಗಲದಲ್ಲಿ ಕರ್ನಾಟಕ ಸರಕಾರ ನಿರ್ಮಿಸಿರುವ ದಿಗ್ಬಂಧನ ಕೇಂದ್ರ ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ ಎಂದು thenewsminute.com ವರದಿ ಮಾಡಿದೆ. 

2016ರಲ್ಲಿ ವೀಸಾ ಅವಧಿ ಮುಕ್ತಾಯಗೊಂಡಿರುವ ಸುಡಾನಿ ಪ್ರಜೆಯೊಬ್ಬ ಪ್ರಪ್ರಥಮ ಬಂಧಿಯಾಗಿ ದಿಗ್ಬಂಧನ ಕೇಂದ್ರದಲ್ಲಿದ್ದಾನೆ ಎಂದು ವರದಿ ತಿಳಿಸಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸೊಂಡೆಕೊಪ್ಪದ ಸಮೀಪ ನಿರ್ಮಿಸಲಾದ ಈ ಕೇಂದ್ರ ರಾಜ್ಯದ ಪ್ರಪ್ರಥಮ ದಿಗ್ಬಂಧನ ಕೇಂದ್ರವಾಗಿದೆ. ಅಕ್ಟೋಬರ್ ತಿಂಗಳ ಅಂತ್ಯದಿಂದ ಈ ದಿಗ್ಬಂಧನ ಕೇಂದ್ರ ತೆರೆದಿದೆ. ಇಲ್ಲಿ ಸುಮಾರು 30ರಿಂದ 40 ಮಂದಿಯನ್ನು ಇರಿಸಬಹುದು ಎಂದು thenewsminute.com ವರದಿ ತಿಳಿಸಿದೆ. 

ಅಕ್ರಮ ವಲಸಿಗರನ್ನು ಇರಿಸುವುದಕ್ಕಾಗಿ ಇಲ್ಲಿ 6 ಕೋಣೆಗಳಿವೆ. ಕಿಚನ್, ಬಾತ್ ರೂಮ್ ಸೌಲಭ್ಯಗಳು ಇರಲಿದ್ದು, ಕಟ್ಟಡದ ಸುತ್ತಲೂ ಮುಳ್ಳಿನ ಬೇಲಿಯಿದೆ. ಎರಡೂ ಬದಿಗಳಲ್ಲಿ ಒಂದೊಂದು ವಾಚ್ ಟವರ್ ಗಳಿವೆ. 

1992ರಲ್ಲಿ ಎಸ್ಸಿ/ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಆಗಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆನಂತರ ಹಾಸ್ಟೆಲ್ ನಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, 2008ರಲ್ಲಿ ಮುಚ್ಚಲಾಗಿತ್ತು. ಕಳೆದ ವರ್ಷದಿಂದ ಈ ಕಟ್ಟಡವನ್ನು ದಿಗ್ಬಂಧನ ಕೇಂದ್ರವಾಗಿ ಮರುಬಳಕೆ ಮಾಡಲು ಆರಂಭಿಸಲಾಯಿತು.

ಕಟ್ಟಡದ ಸುತ್ತಲೂ ಮುಳ್ಳಿನ ಬೇಲಿ ಇದ್ದರೂ ಕೂಡ ದಿಗ್ಬಂಧನ ಕೇಂದ್ರದ ಜವಾಬ್ದಾರಿ ವಹಿಸಿರುವವರು ಇದೊಂದು ‘ಜೈಲು ಅಲ್ಲ’ ಎಂದು ಹೇಳುತ್ತಾರೆ. “ಈ ಕಟ್ಟಡದೊಳಗೆ ಮುಕ್ತವಾಗಿ ಓಡಾಡಬಹುದು. ಅನುಮತಿಯ ಜೊತೆಗೆ ಕುಟಂಬಸ್ಥರು, ಸ್ನೇಹಿತರ ಜೊತೆ ಮಾತನಾಡಬಹುದು. ಈಗ ನೆಟ್ ವರ್ಕ್ ಸಮಸ್ಯೆಯಿದೆ. ಕಂಪ್ಯೂಟರ್, ಇಂಟರ್ ನೆಟ್, ಟೆಲಿಫೋನ್ ಸೌಲಭ್ಯಗಳು ಸಿದ್ಧವಾದ ಮೇಲೆ ಈ ಸಮಸ್ಯೆ ಸರಿಯಾಗಲಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ thenewsminute.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News