ಅಂತರ್‌ರಾಷ್ಟ್ರೀಯ ವೆಬ್‍ಸೈಟ್ ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಿದ ಬೆಂಗಳೂರು ಪೊಲೀಸರು

Update: 2020-11-18 12:14 GMT

ಬೆಂಗಳೂರು, ನ.18: ರಾಜ್ಯ ಸರಕಾರದ ವೆಬ್‍ಸೈಟ್ ಸೇರಿ ಅಂತರ್‌ರಾಷ್ಟ್ರೀಯ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಅಂತರ್‌ರಾಷ್ಟ್ರೀಯ ಹ್ಯಾಕರ್ ಹಾಗೂ ಮಾದಕ ವ್ಯಸನಿ ಶ್ರೀಕೃಷ್ಣ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದರಿಂದ, ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಜಯನಗರ ನಿವಾಸಿಯಾಗಿರುವ ಶ್ರೀಕೃಷ್ಣ (25)ನ ಬಂಧನ ಸಿಸಿಬಿ ಪೊಲೀಸರ ಮಹತ್ವದ ಕಾರ್ಯಾಚರಣೆಯಾಗಿದ್ದು, ಆರೋಪಿಯ ಬಂಧನದಿಂದ ಹಲವು ವೆಬ್‌‌ಸೈಟ್ ಹ್ಯಾಕ್, ವಿದೇಶದಿಂದ ಡಾರ್ಕ್ ವೆಬ್ ಮೂಲಕ ಮಾದಕವಸ್ತು ತರಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.

ನ.4ರಂದು ವಿದೇಶದಿಂದ ಅಂಚೆ ಮೂಲಕ ಹೈಡ್ರೋ ಗಾಂಜಾ ತರಿಸಲಾಗಿತ್ತು. ಅದನ್ನು ತೆಗೆದುಕೊಂಡು ಹೋಗಲು ಚಾಮರಾಜಪೇಟೆ ಫಾರಿನ್ ಪೋಸ್ಟ್ ಕಚೇರಿಗೆ ಬಂದಿದ್ದ ಸದಾಶಿವನಗರ ನಿವಾಸಿ, ಆರೋಪಿ ಎಂ.ಸುಜಯ್ ಎಂಬಾತನನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ 500 ಗ್ರಾಂ ತೂಕದ ಹೈಡ್ರೋ ಗಾಂಜಾದ ಸಮೇತ ಬಂಧಿಸಿದ್ದರು. ಈ ಬಗ್ಗೆ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣೆಯ ವೇಳೆ ಆತ ನೀಡಿದ್ದ ಮಾಹಿತಿ ಆಧಾರದ ಮೇಲೆ ಹೇಮಂತ್ ಮುದ್ದಪ್ಪ, ಸುನೀಶ್ ಹೆಗ್ಡೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಈ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಯಿತು ಎಂದು ಕಮಲ್ ಪಂತ್ ತಿಳಿಸಿದರು.

ತನಿಖೆಯ ಸಂದರ್ಭದಲ್ಲಿ, ಆರೋಪಿ ಸುನೀಶ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿ ಸೋದರ ಸಂಬಂಧಿಗಳಾಗಿದ್ದು, ಈ ಇಬ್ಬರು ಒಟ್ಟಾಗಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಡಾರ್ಕ್ ವೆಬ್ ಎಂಬ ವೆಬ್‍ಸೈಟ್ ಮೂಲಕ ಹೈಡ್ರೋ ಗಾಂಜಾವನ್ನು ಬುಕ್ ಮಾಡಿ, ಶ್ರೀಕೃಷ್ಣ ಮುಖಾಂತರ ಬಿಟ್ ಕಾಯಿನ್ ಅನ್ನು ಖರೀದಿ ಮಾಡಿ, ಈ ಬಿಟ್ ಕಾಯಿನ್ ಮೂಲಕ ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡಿ, ವಿದೇಶದಿಂದ ಹೈಡ್ರೋ ಗಾಂಜಾವನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು. ಮಾತ್ರವಲ್ಲ ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್‍ನಲ್ಲಿ ಈ ಹೈಡ್ರೋ ಗಾಂಜಾವನ್ನು ಹೇಮಂತ್ ಕ್ಲಿಯರೆನ್ಸ್ ಮಾಡಿ ಬಿಡಿಸಿಕೊಂಡು ಬಂದು ಸರಬರಾಜು ಮಾಡಿ ಮನೀಶ್ ಹೆಗ್ಡೆ, ಪ್ರಸಿದ್, ಸುಜಯ್, ಶ್ರೀಕೃಷ್ಣ ಹಾಗೂ ಇತರರು ಸೇವನೆ ಮಾಡುತ್ತಿದ್ದರು. ಅಲ್ಲದೆ ಇತರರಿಗೂ ಸರಬರಾಜು ಮಾಡುತ್ತಿದ್ದರು. ನ.17ರಂದು ಆರೋಪಿ ಶ್ರೀಕೃಷ್ಣನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿವರೆಗೆ ಓದಿರುವ ಶ್ರೀಕೃಷ್ಣ, ಭಾರತೀಯ ಪೋಕರ್ ವೆಬ್‌‌ಸೈಟ್, ಆನ್ ಲೈನ್ ಬಿಟ್ ಕಾಯಿನ್ಸ್ ಹಾಗೂ ಇತರ ವೆಬ್‌‌ಸೈಟ್‍ಗಳನ್ನು ಹ್ಯಾಕ್ ಮಾಡಿ ಹಣ ಸಂಪಾದನೆ ಮಾಡುವ ಕೃತ್ಯದಲ್ಲಿ ತೊಡಗಿದ್ದನು ಎಂದು ಕಮಲ್ ಪಂತ್ ಅವರು ತಿಳಿಸಿದರು.

ಮುಖ್ಯವಾಗಿ 2019ನೆ ಸಾಲಿನಲ್ಲಿ ಸರಕಾರದ ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್ ಹಾಕ್ ಮಾಡಿರುವುದನ್ನು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸಿಐಡಿ ಘಟಕದಲ್ಲಿ ಪ್ರಕರಣ ದಾಖಲಾಗಿ ತನಿಖೆಯ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಈ ತಂಡವು ಮೊದಲಿಗೆ ಡ್ರಗ್ಸ್ ಅಕ್ರಮಗಳನ್ನು ಪ್ರಾರಂಭಿಸಿದ್ದು, ನಂತರ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿತ್ತು. ಬಳಿಕ ಬಿಟ್ ಕಾಯಿನ್ ಅಕ್ರಮಗಳಲ್ಲಿ ಭಾಗಿಯಾಗುತ್ತಾ, ಪೋಕರ್ ಗೇಮ್ ಅಪ್ಲಿಕೇಷನ್ ಹ್ಯಾಕ್ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದರು. ಹಾಲಿ ಸರಕಾರದ ವೆಬ್‌‌ಸೈಟ್‍ಗಳನ್ನು ಹ್ಯಾಕ್ ಮಾಡಿ ವಂಚನೆ ಮಾಡುವ ಮಟ್ಟಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಕಮಲ್ ಪಂತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್  ಸೇರಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News