ಮಂಗಳೂರು: ಪಾಲಿಕೆ ಒಳಚರಂಡಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಧರಣಿ

Update: 2020-11-19 07:39 GMT

ಮಂಗಳೂರು, ನ. 19: ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ದುಡಿಯುವ ಕಾರ್ಮಿಕರು ಕಳೆದ ಸುಮಾರು 15 ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ಈಗಾಗಲೇ ಹಲವು ಬಾರಿ ಮನವಿ ನೀಡಲಾಗಿದ್ದು, ಇದೀಗ ನಮ್ಮ ಬೇಡಿಕೆ ಈಡೇರದಿದ್ದರೆ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ದಸಂಸ- ಅಂಬೇಡ್ಕರ್‌ವಾದ)ಯ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ ಎಚ್ಚರಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗವನ್ನು ಹೊರಗುತ್ತಿಗೆ ಸಂಸ್ಥೆಗೆ ನೀಡಿದ್ದು, ಕಾರ್ಮಿಕರ ಸಮಸ್ಯೆಗಳ ಕುರಿತು ಪಾಲಿಕೆ ಅಧಿಕಾರಿ ವರ್ಗ ಹಾಗೂ ಸಹಾಯಕ ಕಾರ್ಮಿಕ ಇಲಾಖೆ ಅಧಿಕಾರಿ ವರ್ಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದಸಂಸ ನೇತೃತ್ವದಲ್ಲಿ ಆಯೋಜಿಸಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಒಳಚರಂಡಿ ವಿಭಾಗದ ಕಾರ್ಮಿಕರು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಕೆಲಸ ಮಾಡುವಂತಾಗಿದೆ. ನಗರದಲ್ಲಿ ಮ್ಯಾನ್‌ಹೋಲ್ ಸಮಸ್ಯೆ ಎದುರಾದಾಗಲೂ ಈ ಕಾರ್ಮಿಕರನ್ನು ಬಳಸಲಾಗುತ್ತದೆ. ಆದರೆ ಅವರಿಗೆ ಅಗತ್ಯವಾದ ಸೌಲಭ್ಯಗಳ ಬಗ್ಗೆ ಆಡಳಿತ ವರ್ಗ ಗಮನಹರಿಸುತ್ತಿಲ್ಲ. ಆರೋಗ್ಯ ಸಮಸ್ಯೆಯ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ. ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದರೆ ಅಧಿಕಾರಿಗಳೇ ಕಾರ್ಮಿಕರ ಕೆಲಸವನ್ನು ಮಾಡಲಿ. ಆಗ ಅವರಿಗೆ ಕಾರ್ಮಿಕರ ಸಂಕಷ್ಟ ಅರ್ಥವಾಗಬಹುದು ಎಂದು ಜಗದೀಶ್ ಪಾಂಡೇಶ್ವರ ಬೇಸರ ವ್ಯಕ್ತಪಡಿಸಿದು.

ಕಾರ್ಮಿಕ ರವಿ ಮಾತನಾಡಿ, ಕಳೆದ 30 ವರ್ಷಗಳಿಂದ ನಾವು ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಗುತ್ತಿಗೆಯಡಿ ಕೆಲಸ ನಿರ್ವಹಿಸುವ ನಮಗೆ ಹೊಸತಾಗಿ ಕೆಲಸಕ್ಕೆ ಸೇರುವವರಿಗೂ ಒಂದೇ ರೀತಿಯ ವೇತನ ನೀಡಲಾಗುತ್ತಿದೆ. ಕಳೆದ ಸುಮಾರು 15 ವರ್ಷಗಳಿಂದ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗೆ ಪರಿಹಾರ ದೊರೆಯದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಿದ್ದೇವೆ ಎಂದರು.

ಧರಣಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್., ನಾಗೇಶ ಮುಲ್ಲಕಾಡು, ಗಂಗಾಧರ ಅದ್ಯಪಾಡಿ, ಶೇಸಪ್ಪ ನೆಕ್ಕಿಲು, ಶ್ರೀಧರ ಕಳಂಜೆ, ಚಂದ್ರ ಕಡಂದಲೆ, ನೇಮಿರಾಜ್ ಬೆಳ್ತಂಗಡಿ, ದಯಾನಂದ, ನಾರಾಯಣ ಪಡುಬೆಟ್ಟು, ಚಂದ್ರ ಕುಮಾರ್, ಗಣೇಶ್ ಸೂಟರ್ ಪೇಟೆ, ರಾಜೇಶ್, ಸುನೀಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಧರಣಿಯ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News