ಯಶವಂತಪುರ-ವಾಸ್ಕೋಡ ಗಾಮ ನಡುವೆ ಹೆಚ್ಚುವರಿ ವಿಶೇಷ ದೈನಂದಿನ ರೈಲು ಓಡಾಟ

Update: 2020-11-19 12:06 GMT

ಉಡುಪಿ, ನ.19: ಕೊಂಕಣ ರೈಲ್ವೆಯು ದಕ್ಷಿಣ-ಪಶ್ಚಿಮ ರೈಲ್ವೆಯ ಸಹಯೋಗ ದೊಂದಿಗೆ ಯಶವಂತಪುರ- ವಾಸ್ಕೋ ಡ ಗಾಮ- ಯಶವಂತ ಪುರ ನಡುವೆ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನ.17ರಿಂದ ಸಾಮಾನ್ಯ ಟಿಕೇಟ್ ದರದಲ್ಲಿ ಓಡಿಸುತ್ತಿದೆ.

ರೈಲು ನಂ.07339/07340 ಯಶವಂತಪುರ-ವಾಸ್ಕೋ ಡ ಗಾಮಗಳ ನಡುವೆ ರೈಲು ನಂ.17310/17309ರ ಮಾರ್ಗ, ಸಮಯ ಹಾಗೂ ನಿಲುಗಡೆಯ ರೀತಿಯಲ್ಲೇ ಮುಂದಿನ ಆದೇಶದವರೆಗೆ ಓಡಾಟ ನಡೆಸಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೈಲು ನಂ.07340 ವಾಸ್ಕೋಡ ಗಾಮ ಹಾಗೂ ಯಶವಂತಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ನ.17ರಿಂದ ರಾತ್ರಿ 9:20ಕ್ಕೆ ವಾಸ್ಕೋ ಡ ಗಾಮದಿಂದ ಹೊರಡಲಿದ್ದು, ಅದು ಮರುದಿನ ಅಪರಾಹ್ನ 12:30ಕ್ಕೆ ಬೆಂಗಳೂರಿನ ಯಶವಂತಪುರವನ್ನು ತಲುಪಲಿದೆ.

ರೈಲು ನಂ.07339 ಯಶವಂತಪುರ- ವಾಸ್ಕೋ ಡ ಗಾಮ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಅಪರಾಹ್ನ 2:30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮುಂಜಾನೆ 6:00 ಗಂಟೆಗೆ ವಾಸ್ಕೋ ಡ ಗಾಮ ತಲುಪಲಿದೆ.

ಈ ರೈಲು ಒಟ್ಟು 21 ಕೋಚ್‌ಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 2 ಟಯರ್ ಎಸಿ 1 ಕೋಚ್, 3ಟಯರ್ ಎಸಿ 2 ಕೋಚ್, ಸ್ಲೀಪರ್ ಕೋಚ್ 11, ಸೀಟಿಂಗ್ 5 ಕೋಚ್, ಎಸ್‌ಎಲ್‌ಆರ್ 2 ಇರುತ್ತದೆ. ಕರಾವಳಿ ಭಾಗದ ಕೊಂಕಣ ರೈಲ್ವೆಯ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರೈಲ್ವೆ ಪ್ರಯಾಣದ ವೇಳೆ ರೈಲಿನಲ್ಲಿ ಹಾಗೂ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರಡಿಸಿರುವ ಕಡ್ಡಾಯ ಮಾಸ್ಕ್ ಧಾರಣೆ, ಸುರಕ್ಷತಾ ಅಂತರ ಕಾಪಾಡುವುದು ಸೇರಿದಂತೆ ಕೋವಿಡ್-19ರ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News