ಉಡುಪಿ ಜಿಲ್ಲಾಸ್ಪತ್ರೆ : 115 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಮಂಜೂರಾತಿ

Update: 2020-11-19 12:08 GMT

ಉಡುಪಿ, ನ.19: ಎರಡು ದಶಕಗಳಿಗೂ ಅಧಿಕ ಸಮಯದ ಕಾಯುವಿಕೆಯ ಬಳಿಕ ನಗರದ ಅಜ್ಜರಕಾಡಿನಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ನ.13ರಂದು ಆದೇಶವನ್ನು ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಅದಕ್ಕನುಗುಣವಾಗಿ ಆಸ್ಪತ್ರೆ ಕಟ್ಟಡ ನಿರ್ಮಾಣ, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಹಾಗೂ ಇತರೆ ಮೂಲಭೂತ ಸೌಲಭ್ಯದ ಕಾಮಗಾರಿಗಳನ್ನು ನಡೆಸಲು ಒಟ್ಟು 11500 (115 ಕೋಟಿ ರೂ.)ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

1997ರ ಆಗಸ್ಟ್ 25ರಂದು ಉಡುಪಿ ಜಿಲ್ಲೆ ರಚನೆಯಾದ ನಂತರ ಅಜ್ಜರಕಾಡಿನಲ್ಲಿದ್ದ ತಾಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಎಂಬುದಾಗಿ ಪದ ನಾಮಾಂಕಿತಗೊಳಿಸಲಾಗಿತ್ತು. ಆದರೆ ಈ ಆಸ್ಪತ್ರೆಯಲ್ಲಿ ಹಿಂದೆ ಇದ್ದ 124 ಹಾಸಿಗೆಗೆ ಅನ್ವಯಿಸುವಂತೆ ಎಲ್ಲಾ ಸೌಲಭ್ಯಗಳೇ ಇದ್ದು, ಇದನ್ನು 250 ಹಾಸಿಗೆಗಳ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನ ಹೆಚ್ಚಿನ ಫಲ ನೀಡಿರಲಿಲ್ಲ.

ಆಸ್ಪತ್ರೆಯಲ್ಲಿ ಹಿಂದೆ ಇದ್ದ 124 ಹಾಸಿಗೆಗೆ ಅನ್ವಯಿಸುವ ಸಿಬ್ಬಂದಿಗಳು ಹಾಗೂ ಕಟ್ಟಡ ವ್ಯವಸ್ಥೆ ಹಾಗೇಯೇ ಮುಂದುವರಿದಿತ್ತು. ಜಿಲ್ಲಾಸ್ಪತ್ರೆಗೆ ಬೇಕಾಗುವ ಮೂಲಭೂತ ಅಗತ್ಯ ಸೌಲಭ್ಯವಾದ 250 ಹಾಸಿಗೆಗಳ ಸಾಮರ್ಥ್ಯದ ಕಟ್ಟಡ, ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳ ನೇಮಕಕ್ಕೆ ಇದುವರೆಗೆ ಮಂಜೂರಾತಿ ಸಿಕ್ಕಿರಲಿಲ್ಲ. ಇದರಿಂದ ಜನರಿಗೆ ಅಗತ್ಯ ಆರೋಗ್ಯ ಸೇವೆ ನೀಡಲು ಅಡಚಣೆಗಳು ಎದುರಾಗುತಿದ್ದವು. ಅಲ್ಲದೇ ಉಡುಪಿಗೆ ಆಸುಪಾಸಿನ ಶಿವಮೊಗ್ಹ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ರೋಗಿಗಳು ಬರುತಿದ್ದು, ಸ್ಥಳಾವಕಾಶದ ಕೊರತೆಯೂ ಎದುರಾಗುತಿದ್ದವು.

ಇದೀಗ 250 ಹಾಸಿಗೆಗಳ ನೂತನ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಭೂತ ಸೌಕರ್ಯಕ್ಕೆ ಸರಕಾರ 115 ಕೋಟಿ ರೂ. ಬಿಡುಗಡೆಗೊಳಿಸಿದೆ. ಇದರಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ 90 ಕೋಟಿ ರೂ., ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ 7.95 ಕೋಟಿ ರೂ., ಹೆಚ್ಚುವರಿ ಮೂಲಸೌಲಭ್ಯಗಳಿಗೆ 13.68 ಕೋಟಿ ರೂ. ಹಾಗೂ ಇತರೆ ವೆಚ್ಚಗಳಿಗೆ 3.35ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News