ಮಾನವೀಯತೆಯೇ ಶ್ರೇಷ್ಠ ಎಂಬುದು ಎಲ್ಲ ಧರ್ಮಗಳ ಸಾರ: ಡಾ.ನಿಕೇತನ

Update: 2020-11-20 16:31 GMT

ಉಡುಪಿ, ನ.20: ಜಾತಿ, ಮತ, ಲಿಂಗ ಧರ್ಮಗಳ ಗೋಡೆಗಳನ್ನು ಕೆಡವಿ ಮನುಷತ್ವದ ಹೆಸರಿನಲ್ಲಿ ಒಂದಾಗಬೇಕಾಗಿದೆ. ಮಾನವೀಯತೆಯೇ ಶ್ರೇಷ್ಠ ಎಂಬುದು ಎಲ್ಲ ಧರ್ಮಗಳ ಸಾರ ಆಗಿದೆ. ಪ್ರೀತಿಯೆ ಮುಖ್ಯ ಎಂಬುದನ್ನು ಪ್ರವಾದಿ ಮುಹಮ್ಮದ್ ಸೇರಿದಂತೆ ಎಲ್ಲ ದಾರ್ಶನಿಕರು ತೋರಿಸಿ ಕೊಟ್ಟಿದ್ದಾರೆ ಎಂದು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ಶುಕ್ರವಾರ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಮಿನಿ ಹಾಲ್‌ನಲ್ಲಿ ಆಯೋಜಿಸಲಾದ ಮಾನವತೆಯ ಪ್ರತಿಪಾದಕ ಪ್ರವಾದಿ ಮುಹಮ್ಮದ್ (ಸ.ಅ.)ರ ಜೀವನ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ಮಾತನಾಡಿ, ಮಾಧ್ಯಮಗಳು ಇಸ್ಲಾಮ್ ಧರ್ಮದ ಬಗ್ಗೆ ಸಮಾಜದಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದೆ. ಜಿಹಾದ್ ಅಂದರೆ ಭಯೋತ್ಪಾದನೆ ಎಂಬ ಅರ್ಥದಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಅವೆರಡರ ನಡುವೆ ರಾತ್ರಿ ಹಗಲಿನ ವ್ಯತ್ಯಾಸ ಇದೆ. ಜಿಹಾದ್ ಎಂಬುದು ಹೋರಾಟ ಆಗಿದೆ ಎಂದರು.

ಜಿಹಾದ್ ಪದವನ್ನು ಮಾಧ್ಯಮಗಳು ಸಮಾಜವನ್ನು ವಿಭಜಿಸುವ ಕಾರ್ಯಕ್ಕೆ ಬಳಕೆ ಮಾಡುತ್ತಿದೆ. ಮೊದಲು ಲವ್ ಜಿಹಾದ್, ನಂತರ ಕೊರೋನ ಜಿಹಾದ್, ಈಗ ಯುಪಿಎಸ್‌ಸಿ ಜಿಹಾದ್ ಎಂಬುದಾಗಿ ಅಪಪ್ರಚಾರ ಮಾಡುತ್ತಿದೆ. ಎಲ್ಲ ದೇಶಗಳಲ್ಲಿ ಹರಡಿದ್ದ ಕೊರೋನ ವೈರಸ್, ಭಾರತಕ್ಕೆ ಬರುವಾಗ ಮಾಧ್ಯಮಗಳಿಗೆ ಕೊರೋನ ಜಿಹಾದ್ ಹಾಗೂ ತಬ್ಲೀಗಿ ವೈರಸ್ ಆಗಿ ಮಾರ್ಪಟ್ಟಿತ್ತು ಎಂದು ಅವರು ತಿಳಿಸಿದರು.

ಕಲ್ಯಾಣಪುರ ಮಿಲಾಗ್ರೀಸ್ ಚರ್ಚ್‌ನ ಧರ್ಮಗುರು ಫಾ.ವಲೇರಿಯನ್ ಮೆಂಡೋನ್ಸಾ ಮಾತನಾಡಿ, ಪ್ರವಾದಿ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಜಾತಿ, ಮತ ಬೇಧ ಇಲ್ಲದೆ ಹೊಸ ಸಮಾಜವನ್ನು ನಿರ್ಮಾಣ ಇಂದಿನ ಅಗತ್ಯ ಆಗಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಪ್ರವಾದಿ ಅವರ ಎಲ್ಲ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ನಮ್ಮ ವ್ಯಕ್ತಿತ್ವ ಪ್ರಜ್ವಳಿಸಿ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣ ಆಗಬೇಕು ಎಂದರು.

ಮಲ್ಪೆ ಅಬೂಬಕರ್ ಸಿದ್ದೀಕ್ ಜುಮಾ ಮಸೀದಿಯ ಖತೀಬ್ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ವಿಷಯ ಮಂಡಿಸಿದರು. ಅಲೆವೂರು ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ದಿನೇಶ್ ಕಿಣಿ ಮುಖ್ಯ ಅತಿಥಿಯಾಗಿದ್ದರು.

ಮೌಲಾನ ದಾನಿಶ್ ಕುರಾನ್ ಪಠಿಸಿದರು. ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಟಿ.ಎಂ.ಜಫ್ರುಲ್ಲಾ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ವಂದಿಸಿದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News