ನದಿ ನೀರನ್ನು ಶೇಖರಿಸಿಡಲು ಇನ್ನಷ್ಟು ವೆಂಟೆಡ್ ಡ್ಯಾಂಗಳ ನಿರ್ಮಾಣ : ಸಚಿವ ಮಾಧುಸ್ವಾಮಿ
ಕೊಣಾಜೆ: ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ನದಿಗಳಲ್ಲಿ ಕುಡಿಯುವ ನೀರಿನ ಶೇಖರಣೆಗಾಗಿ ವೆಂಟೆಡ್ ಡ್ಯಾಂ ನಿರ್ಮಾಣದ ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಹಲವು ಪ್ರದೇಶಗಳನ್ನು ಗುರುತಿಸಲಾಗಿದ್ದು ಕೇಂದ್ರ ಸರಕಾರದ ಅನುದಾನ ದೊರೆತರೆ ಕೂಡಲೇ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದೆಂದು ಕಾನೂನು ,ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ ಮಾಧು ಸ್ವಾಮಿ ಹೇಳಿದರು.
ಅವರು ಮಂಗಳವಾರದಂದು ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪುನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಗಳೂರು ತಾಲೂಕಿನ ಅಡ್ಯಾರಿನಲ್ಲಿ ನೇತ್ರಾವತಿ ನದಿಗೆ ಹರೇಕಳ ಸಂಪರ್ಕದ 520 ಮೀಟರ್ ಉದ್ದದ ಸೇತುವೆ ಸಹಿತ ಉಪ್ಪು ನೀರು, ಸಿಹಿ ನೀರು ಬೇರ್ಪಡಿಸುವ 661.54 MCFT ಶೇಖರಣಾ ಸಾಮರ್ಥ್ಯದ ಕಿಂಡಿ ಅಣೆಕಟ್ಟನ್ನು ಸುಮಾರು 174 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.2017-18 ನೇ ಸಾಲಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಪಶ್ಚಿಮವಾಹಿನಿ ಯೋಜನೆಯಡಿಯಲ್ಲಿ ಈ ಕಾಮಗಾರಿ ನಡೆಯುತ್ತಿದ್ದು ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಮಂಗಳೂರು ನಗರಕ್ಕೆ ಹೆಚ್ಚುವರಿ ಕುಡಿಯುವ ನೀರು ಪೂರೈಕೆ ಆಗುವುದರ ಜೊತೆಗೆ ಸ್ಥಳೀಯ ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಕಿಂಡಿ ಅಣೆಕಟ್ಟಿನಿಂದ ಬೇರ್ಪಟ್ಟ ಸಿಹಿ ನೀರನ್ನು ಸ್ಥಳೀಯ 261.20 ಹೆಕ್ಟೇರ್ ಕೃಷಿ ಪ್ರದೇಶಗಳಿಗೆ ಪಂಪ್ ಮೂಲಕ ಹರಿಸಲಾಗುವುದು.ಡ್ಯಾಂನಲ್ಲಿ ಫುಟ್ ಪಾತ್ ಸೇರಿ 10 ಮೀಟರ್ ಅಗಲದ ಅಡ್ಯಾರ್-ಹರೇಕಳ ಸಂಪರ್ಕ ಸೇತುವೆಯೂ ನಿರ್ಮಾಣಗೊಳ್ಳಲಿದ್ದು,ಅವಶ್ಯಕತೆ ಬಿದ್ದಲ್ಲಿ ಮತ್ತೆ ಎರಡು ಮೀಟರ್ ಅಗಲಿಸಲು ಯೋಜನೆ ರೂಪಿಸಲಾಗುವುದು. ಇದರಿಂದ ಮಂಗಳೂರು- ಹರೇಕಳ ಪ್ರಯಾಣ ಸುಗವಾಗಲಿದೆ ಮತ್ತು ನಗರ ಸಂಪರ್ಕಿಸುವ ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ವೆಂಟೆಡ್ ಡ್ಯಾಂನಲ್ಲಿ 52 ಕಿಂಡಿಗಳಿದ್ದು ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ 2021 ನೇ ನವೆಂಬರ್ ನಲ್ಲಿ ಅಣೆಕಟ್ಟು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಕಾರವಾರ ಜಿಲ್ಲೆಯಲ್ಲೂ ಉಪ್ಪುನೀರು,ಸಿಹಿ ನೀರು ಬೇರ್ಪಡಿಸುವ ಕಾರ್ಲ್ಯಾಂಡ್ ಡ್ಯಾಮ್ ನಿರ್ಮಾಣ ಯೋಜನೆಯಿದೆ ಎಂದರು.
ಅಣೆಕಟ್ಟು ಗುತ್ತಿಗೆದಾರರಾದ ಜಿ.ಶಂಕರ್ ಉಡುಪಿ ಮತ್ತು ಇಲಾಖಾ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.