ಉಡುಪಿ : ಕಾಲೇಜು ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಹಿಂದೇಟು

Update: 2020-11-25 15:52 GMT

ಉಡುಪಿ, ನ. 25: ಎಂಟು ತಿಂಗಳ ‘ಕೊರೋನ ರಜೆ’ಯ ಬಳಿಕ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಾದ್ಯಂತ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಅಂತಿಮ ವರ್ಷದ ತರಗತಿಗಳು ಪ್ರಾರಂಭಗೊಂಡು ವಾರ ಕಳೆದರೂ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿ ಗಳು ಹೆಚ್ಚಿನ ಉತ್ಸಾಹ ತೋರದಿರುವುದು ಕಾಲೇಜಿನ ತರಗತಿಗಳಿಗೆ ಹಾಜರಾಗು ತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ನೋಡಿದರೆ ಅನುಭವಕ್ಕೆ ಬರುತ್ತದೆ.

ದೀಪಾವಳಿ ರಜೆ ಕಳೆದ ಬಳಿಕ ನ.17ರಿಂದ ಕಾಲೇಜು ಅಂತಿಮ ವರ್ಷದ ಪದವಿ ತರಗತಿಗಳನ್ನು ತೆರೆಯಲು ಸರಕಾರ ಅನುಮತಿ ನೀಡಿತ್ತು. ಆದರೆ ತರಗತಿಗೆ ಹಾಜರಾಗುವ ವಿದ್ಯಾರ್ಥಿ ಹೆತ್ತವರ ಅನುಮತಿ ಪತ್ರ ಹಾಗೂ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಾಲೇಜಿಗೆ ನೀಡುವುದನ್ನು ಕಡ್ಡಾಯಗೊಳಿಸಿತ್ತು.

ಮೊದಲ ಕೆಲವು ದಿನ ಕೋವಿಡ್ ಪರೀಕ್ಷೆ, ಅವುಗಳ ವರದಿಗಾಗಿ ಕಾಯಲಾಗುತಿದ್ದಾರೂ, ಜಿಲ್ಲೆಯಲ್ಲಿ ಈಗಾಗಲೇ 6000ಕ್ಕೂ ಅಧಿಕ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ನಡೆಸಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ತಿಳಿಸಿದೆ. ಇವುಗಳಲ್ಲಿ ಇಂದಿನವರೆಗೆ 32 ಮಂದಿ ವಿದ್ಯಾರ್ಥಿಗಳು ಪಾಸಿಟಿವ್ ಬಂದಿದ್ದು, ಉಳಿದವರೆಲ್ಲಾ ನೆಗೆಟಿವ್ ಆಗಿದ್ದಾರೆ ಎಂದು ಇಲಾಖೆ ಹೇಳಿದೆ. ಆದರೆ ಪರೀಕ್ಷೆಗೊಳಪಚ್ಚು ನೆಗೆಟಿವ್ ಫಲಿತಾಂಶ ಪಡೆದ ವಿದ್ಯಾರ್ಥಿಗಳಲ್ಲಿ ಅಧಿಕ ಮಂದಿ ಕಾಲೇಜುಗಳಿಗೆ ಹಾಜರಾಗುತ್ತಿಲ್ಲ. ತರಗತಿಗೆ ಬರುವವರ ಸಂಖ್ಯೆ 500ನ್ನೂ ಮೀರಿಲ್ಲ ಎಂಬುದು ಪ್ರಾಧ್ಯಾಪಕರೊಬ್ಬರ ಅನಿಸಿಕೆ.

ಆರಂಭದಲ್ಲಿ ಹೆಚ್ಚಿನ ಸರಕಾರಿ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳು ಕಾಲೇಜು ಗಳಿಗೆ ಬರುವಾಗಲೇ ಕೋವಿಡ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿದ್ದವು. ಆದರೆ ಹೀಗೆ ಬಂದು ಕೋವಿಡ್ ಪರೀಕ್ಷೆಗೊಳಪಟ್ಟ ವಿದ್ಯಾರ್ಥಿಗಳು ನೆಗೆಟಿವ್ ವರದಿ ಬಂದರೂ ಮತ್ತೆ ಕಾಲೇಜಿಗೆ ಬಂದಿಲ್ಲ ಎಂದು ಕೆಲವು ಕಾಲೇಜುಗಳ ಪ್ರಾಧ್ಯಾಪಕರು ಹೇಳುತ್ತಾರೆ. ಅವರು ಆನ್‌ಲೈನ್ ಪಾಠಕ್ಕೆ ಹೆಚ್ಚಿನ ಗಮನ ನೀಡುತಿದ್ದಾರೆ ಎಂದು ಅವರ ಅನಿಸಿಕೆ.

ಮಹಿಳಾ ಕಾಲೇಜಿನಲ್ಲಿ 194 ಮಂದಿ: ಪತ್ರಿಕೆ ಮಾಹಿತಿ ಸಂಗ್ರಹಿಸಿದ ಕಾಲೇಜುಗಳಲ್ಲಿ ಅಜ್ಜರಕಾಡಿನಲ್ಲಿರುವ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲೇ ಅತ್ಯಧಿಕ ಸಂಖ್ಯೆಯ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗುತಿದ್ದಾರೆ. ಈ ಕಾಲೇಜಿನಲ್ಲಿ ಬುಧವಾರ ಒಟ್ಟು 194 ಮಂದಿ ವಿದ್ಯಾರ್ಥಿನಿಯರು ತರಗತಿಗಳಲ್ಲಿ ಕುಳಿತು ಪಾಠ ಆಲಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾಸ್ಕರ ಶೆಟ್ಟಿ ತಿಳಿಸಿದರು.

ಕಾಲೇಜಿನಲ್ಲಿ ಒಟ್ಟು 849 ಮಂದಿ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಕಲಿಯುತಿದ್ದಾರೆ. ಇವರಲ್ಲಿ ಇಂದು 194 ಮಂದಿ ಮಾತ್ರ ಕಾಲೇಜಿಗೆ ಬಂದಿದ್ದಾರೆ. ಇವರಲ್ಲಿ 161 ಮಂದಿ ಪದವಿ ವಿದ್ಯಾರ್ಥಿಗಳಾದರೆ ಉಳಿದ 33 ಮಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು. ಉಳಿದವರು ಆನ್‌ಲೈನ್‌ನಲ್ಲಿ ತರಗತಿಗಳಿಗೆ ಹಾಜರಾಗುತಿದ್ದಾರೆ ಎಂದು ಅವರು ನುಡಿದರು.

ನಿನ್ನೆ 176 ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಿದ್ದರು. ಇಂದು ಸಂಖ್ಯೆ ಹೆಚ್ಚಾಗಿದೆ. ಹೀಗೆ ದಿನದಿನ ಇವರ ಸಂಖ್ಯೆಯಲ್ಲಿ ಹೆಚ್ಚಳವಾಗು ವುದೆಂಬ ವಿಶ್ವಾಸ ನಮಗಿದೆ. ಇವರಿಗೆ ಕಾಲೇಜಿನ 40 ಮಂದಿ ಖಾಯಂ ಪ್ರಾಧ್ಯಾಪಕರು ದಿನವಿಡೀ ತರಗತಿಗಳನ್ನು ತೆಗೆದುಕೊಳ್ಳುತಿದ್ದಾರೆ. ಒಬ್ಬ ಅಧ್ಯಾಪಕಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಶೆಟ್ಟಿ ಹೇಳಿದರು.

ತೆಂಕನಿಡಿಯೂರಲ್ಲಿ 57 ಮಂದಿ: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ತರಗತಿಗೆ ಹಾಜರಾದವರು ಒಟ್ಟು 57 ಮಂದಿ. ಇವರೆಲ್ಲರೂ ಪದವಿಗೆ ಕಲಿಯುತ್ತಿರುವವರು. ಇಲ್ಲಿ ಸ್ನಾತಕೋತ್ತರ ಪದವಿ ತರಗತಿಗೆ ಯಾವುದೇ ವಿದ್ಯಾರ್ಥಿ ಹಾಜರಾಗುತ್ತಿಲ್ಲ ಎಂದು ಕಾಲೇಜಿನ ಸ್ನಾತಕೋತ್ತರ ಪದವಿ ವಿಭಾಗದ ಡಾ. ದುಗ್ಗಪ್ಪ ಕಜೆಕಾರ್ ತಿಳಿಸಿದರು.

ಇಲ್ಲೂ ಮಂಗಳವಾರ 32 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಈ ಸಂಖ್ಯೆ ಇಂದು ಹೆಚ್ಚಿದೆ. ನಾಳೆ ಇನ್ನಷ್ಟು ಮಂದಿ ಬರುವ ನಿರೀಕ್ಷೆಯಲ್ಲಿದ್ದೇವೆ. ಪಿಜಿ ವಿದ್ಯಾರ್ಥಿಗಳು ಆನ್‌ಲೈನ್‌ಗೆ ಹೆಚ್ಚಿನ ಆದ್ಯತೆ ನೀಡುತಿದ್ದಾರೆ ಎಂದವರು ಅಭಿಪ್ರಾಯ ಪಟ್ಟರು.

ಎಂಜಿಎಂನಲ್ಲಿ 16 ಮಂದಿ: ನಗರದ ಮಹಾತ್ಮಗಾಂಧಿ ಸ್ಮಾರಕ ಕಾಲೇಜಿನಲ್ಲಿ ಇಂದು 16 ಮಂದಿ ಮಾತ್ರ ತರಗತಿಗೆ ಹಾಜರಾಗಿದ್ದರು. ಇವರೆಲ್ಲರೂ ಅಂತಿಮ ವರ್ಷ ಬಿಎಸ್ಸಿ ವಿದ್ಯಾರ್ಥಿಗಳು. ನಿನ್ನೆ 14 ಮಂದಿ ಹಾಜರಾಗಿದ್ದರು. ಇವರು ಸಹ ವಿಜ್ಞಾನ ವಿದ್ಯಾರ್ಥಿಗಳು. ಮೊನ್ನೆ 12 ಮಂದಿ ಬಿಎಎಸ್ಸಿ ಹಾಗೂ ಮೂವರು ಬಿಕಾಂ ವಿದ್ಯಾರ್ಥಿಗಳು ತರಗತಿಗೆ ಬಂದಿದ್ದರು ಎಂದು ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯಕ್ ತಿಳಿಸಿದರು. ಆದರೆ ಎಂಎಸ್ಸಿಯ ಯಾವುದೇ ವಿದ್ಯಾರ್ಥಿ ತರಗತಿಗೆ ಬರುತ್ತಿಲ್ಲ. ಅವರು ಆನ್‌ಲೈನ್‌ನ್ನೇ ನೆಚ್ಚಿಕೊಂಡಿದ್ದಾರೆ ಎಂದು ಡಾ.ನಾಯಕ್ ತಿಳಿಸಿದರು.

ಉಡುಪಿಯ ಮತ್ತೊಂದು ಖಾಸಗಿ ಕಾಲೇಜು ಆಗಿರುವ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂದು ಯಾರೂ ತರಗತಿಗೆ ಹಾಜರಾಗಿಲ್ಲ. ಇಲ್ಲಿ 500ಕ್ಕೂ ಅಧಿಕ ಪದವಿ ಹಾಗೂ 38 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿದ್ದಾರೆ. ನಿನ್ನೆ ಮತ್ತು ಮೊನ್ನೆ ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದ್ದೇವೆ. ವರದಿ ಕಾಯಲಾಗುತ್ತಿದೆ. ಇದರಲ್ಲಿ ನೆಗೆಟಿವ್ ಬಂದವರು ತರಗತಿ ಬರುವ ನಿರೀಕ್ಷೆ ಇದೆ ಎಂದು ಕಾಲೇಜಿನ ಪ್ರಾಧ್ಯಾಪಕರು ತಿಳಿಸಿದರು.

ಪಿಪಿಸಿಯಲ್ಲಿ ಕಳೆದ ಆಗಸ್ಟ್‌ನಿಂದಲೇ ಆನ್‌ಲೈನ್ ತರಗತಿಗಳನ್ನು ನಿಯಮಿತ ವಾಗಿ ನಡೆಸಲಾಗುತ್ತಿದೆ. ತರಗತಿಗಳಲ್ಲಿ ನಡೆಯುವ ಪಾಠದಂತೆ ಪ್ರತಿದಿನ ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ಗಳನ್ನೇ ಹೆಚ್ಚು ನೆಚ್ಚಿಕೊಂಡಂತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

Writer - ಬಿ.ಬಿ. ಶೆಟ್ಟಿಗಾರ್

contributor

Editor - ಬಿ.ಬಿ. ಶೆಟ್ಟಿಗಾರ್

contributor

Similar News