‘ಹಿಗ್ಗು -ಅರಿವಿನಮಾಲೆ’ ಪುಸ್ತಕ ದತ್ತಿ ಗ್ರ್ಯಾಂಟ್‌ಗೆ ಪಂಜು ಗಂಗೊಳ್ಳಿ ‘ಕುಂದಾಪ್ರ ಕನ್ನಡ ನಿಘಂಟು’ ಆಯ್ಕೆ

Update: 2020-11-27 14:51 GMT
ಪಂಜು ಗಂಗೊಳ್ಳಿ

ಕುಂದಾಪುರ, ನ.27: ತಲ್ಲೂರಿನ ‘ತಲ್ಲೂರು ಫ್ಯಾಮಿಲಿ ಟ್ರಸ್ಚ್’ ಸ್ಥಾಪಿಸಿರುವ ಹಿಗ್ಗು-ಅರಿವಿನಮಾಲೆ ಪುಸ್ತಕ ದತ್ತಿಯ ಚೊಚ್ಚಲ ಗ್ರ್ಯಾಂಟ್‌ನ್ನು ನಾಡಿನ ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ ‘ಕುಂದ್ರಾಪ ಕನ್ನಡ ನಿಘಂಟು’ ಎಂಬ ಬೃಹತ್ ಕುಂದಗನ್ನಡ ಪದಕೋಶಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ನ ಡಳಿತ ಟ್ರಸ್ಟಿ ಸುರೇಶ್ ತಲ್ಲೂರು ತಿಳಿಸಿದ್ದಾರೆ.

ಕರಾವಳಿಯ ನೆಲ, ಜಲ, ಪರಿಸರ ಮತ್ತು ಬದುಕನ್ನು ಆರೋಗ್ಯಪೂರ್ಣವಾದ ಮನಸ್ಸುಗಳೊಂದಿಗೆ ಕಟ್ಟುವ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪುಟ್ಟಪುಟ್ಟ ಪ್ರಯತ್ನಗಳ ಸರಣಿಯೇ ‘ಕರಾವಳಿ ಕಟ್ಟು’. ಈ ಚಳುವಳಿಯ ಭಾಗವಾಗಿ ಈಗಾಗಲೇ ‘ತಲ್ಲೂರು ನುಡಿಮಾಲೆ’ ದತ್ತಿನಿಧಿ ಉಪ್ಯಾಸಗಳು ನಡೆದಿವೆ. ಮತ್ತು ಕೊರೋನ ಕಾಲದಲ್ಲಿ ರಚಿಸಲಾಗಿರುವ ವೀಡಿಯೊ ಸರಣಿಗಳು ಚಾಲ್ತಿಯಲ್ಲಿವೆ ಎಂದವರು ವಿವರಿಸಿದ್ದಾರೆ.

ಈ ಚಳುವಳಿಯ ಮುಂದುವರಿದ ಭಾಗವಾಗಿ ‘ಹಿಗ್ಗು-ಅರಿವಿನ ಮಾಲೆ’ ಯೋಜನೆಯನ್ನು ರೂಪಿಸಲಾಗಿದ್ದು, ಎರಡು ಲಕ್ಷ ರೂ. ಮೊತ್ತದ ಈ ಪುಸ್ತಕ ಪ್ರಕಟಣೆ ದತ್ತಿಯನ್ನು ಕರಾವಳಿಯ ಅನನ್ಯ, ಅಪರೂಪದ ಮತ್ತು ವೌಲಿಕವಾದ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಿರಿಸಲು ತಲ್ಲೂರು ಫ್ಯಾಮಿಲಿ ಟ್ರಸ್ಟ್ ನಿರ್ಧರಿಸಿದೆ ಎಂದವರು ಹೇಳಿದ್ದಾರೆ.

ಈ ಮೂಲಕ ಕಾಲಕಾಲಕ್ಕೆ ಮಹತ್ವದ್ದಾದ, ಆದರೆ ಪ್ರಕಟಣೆಯ ಬೆಳಕು ಕಾಣಲು ಸಾಧ್ಯವಾಗದ ಅರ್ಹ ಪುಸ್ತಕಗಳನ್ನು ಬೆಳಕಿಗೆ ತರಲು ಈ ಗ್ರ್ಯಾಂಟ್‌ನ್ನು ವಿನಿಯೋಗಿಸಲಾಗುತ್ತದೆ ಎಂದವರು ಕುಂದಾಪುರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ವೃತ್ತಿಪರ ವ್ಯಂಗ್ಯಚಿತ್ರಕಾರರಾದ ಪಂಜು ಗಂಗೊಳ್ಳಿ ಅವರು ಎರಡು ದಶಕಗಳ ಕಾಲ ಶ್ರಮಿಸಿ, ಸಂಗ್ರಹಿಸಿ, ಸಂಪಾದಿಸಿದ ‘ಕುಂದಾಪ್ರ ಕನ್ನಡ ನಿಘಂಟು’ ಸುಮಾರು 10,000ಕ್ಕೂ ಅಧಿಕ ಕುಂದಾಪ್ರ ಕನ್ನಡ ಪದಗಳ ಮತ್ತು 1700ರಷ್ಟು ಕುಂದಾಪ್ರ ಕನ್ನಡದ ನುಡಿಗಟ್ಟುಗಳ ಅರ್ಥ ವಿವರಣೆ ನೀಡುತ್ತದೆ. ಜೊತೆಗೆ ಕುಂದಾಪ್ರ ಕನ್ನಡಗ ರೀತಿ, ರಿವಾಜು, ಕಟ್ಟುಪಾಡು, ಆಚಾರವಿಚಾರಗಳನ್ನು ಒಳಗೊಂಡಿದೆ. ವಿಶಿಷ್ಟ ರೀತಿಯ ಸಾಂಸ್ಕೃತಿಕ ಕೋಶವಾಗಿ ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಮಹತ್ವದ ಕೆಲಸವನ್ನು ಪಂಜು ಗಂಗೊಳ್ಳಿ ಸುಮಾರು 700 ಪುಟಗಳ ಈ ಶಬ್ಧಕೋಶದದ ಮೂಲಕ ಮಾಡಿದ್ದಾರೆ ಎಂದು ಟ್ರಸ್ಟ್ ಅಭಿನಂದಿಸಿದೆ.

ಉಡುಪಿಯ ಪ್ರೊಡಿಜಿ ಮುದ್ರಣ ಸಂಸ್ಥೆಯ ಪ್ರೊಡಿಜಿ ಪ್ರಕಾಶನದಿಂದ ಪ್ರಕಟಗೊಳ್ಳುವ ಈ ನಿಘಂಟು, ಮುಂದಿನ ವರ್ಷದ ಪ್ರಾರಂಭದಲ್ಲಿ ಪ್ರಕಟ ಗೊಂಡು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಸುರೇಶ್ ತಲ್ಲೂರು ತಿಳಿಸಿದರು.

ಪಂಜು ಗಂಗೊಳ್ಳಿ

‘ಮುಂಗಾರು’, ‘ಲಂಕೇಶ ಪತ್ರಿಕೆ’ಗಳ ಮೂಲಕ ವ್ಯಂಗ್ಯಚಿತ್ರಕಾರರಾಗಿ ನಾಡಿಗೆ ಪರಿಚಿತರಾದ ಪಂಜು ಗಂಗೊಳ್ಳಿ, ಕುಂದಾಪುರದ ಗಂಗೊಳ್ಳಿ ಯವರು. ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಪಡೆದು ಕಾರ್ಟೂನಿಸ್ಟ್ ಆಗಿ ಪತ್ರಿಕೋದ್ಯಮಕ್ಕೆ ಕಾಲಿರಿಸಿದರು. ಕನ್ನಡದಲ್ಲಿ ಕೆಲವರ್ಷ ದುಡಿದ ಬಳಿಕ ಪ್ರೀತೀಶ್ ನಂದಿ ಸಂಪಾದಕತ್ವದ ‘ದಿ ಸಂಡೇ ಅಬ್ಸರ್ವರ್’ ಮೂಲಕ ಇಂಗ್ಲೀಷ್ ಪತ್ರಿಕೋದ್ಯಮಕ್ಕೆ ಕಾಲಿಟ್ಟು ಕಳೆದ 20 ವರ್ಷಗಳಿಂದ ‘ಬ್ಯುಸಿನೆಸ್ ಇಂಡಿಯಾ’ ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ದುಡಿಯುತಿದ್ದಾರೆ.

ಆನುವಂಶಿಕವಾಗಿ ಬಂದ ಚಿತ್ರಕಲೆ ಅವರಿಗೆ ವೃತ್ತಿಯಾದರೆ, ಬರವಣಿಗೆ ಪ್ರವೃತ್ತಿ. ‘ಮೂಢನಂಬಿಕೆಗಳ ವಿಶ್ವರೂಪ’ ‘ರುಜು’ ಇವರ ಪ್ರಕಟಿತ ಕೃತಿಗಳು. ಸ್ನೇಹಿತರೊಂದಿಗೆ ಸೇರಿ ಕಳೆದ ಎರಡು ದಶಕಗಳಿಂದ ರಚಿಸುತ್ತಿರುವ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣೆಗೆ ಸಿದ್ಧವಾಗಿದೆ. ಕುಂದಾಪ್ರ ಕನ್ನಡ ಹಾಡುಗಳು ತಯಾರಿಯ ಹಂತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News