​ಗೋಡೆ ಬರಹದ ಹಿಂದಿರುವ ಷಡ್ಯಂತ್ರ ಬಹಿರಂಗ ಪಡಿಸುವ ಹೊಣೆಗಾರಿಕೆ ಸರಕಾರದ್ದು : ಯು.ಟಿ.ಖಾದರ್

Update: 2020-11-29 07:55 GMT

ಮಂಗಳೂರು, ನ. 29: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕಂಡು ಬಂದಿರುವ ದೇಶದ್ರೋಹದ ಗೋಡೆ ಬರಹದ  ಹಿಂದಿನ ಷಡ್ಯಂತ್ರ ಬಹಿರಂಗ ಪಡಿಸುವ  ಮತ್ತು ಇಂತಹ ದೇಶ ದ್ರೋಹಿಗಳನ್ನು ಗಡಿಪಾರು ಮಾಡುವ ಹೊಣೆಗಾರಿಕೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸೇರಿದ್ದು, ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಹಾಗೂ ಕೇಂದ್ರ ಸರಕಾರವನ್ನು ತನಿಖೆಗೆ ಆಗ್ರಹಿಸುವುದಾಗಿ ಶಾಸಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಹಿಂದೆಯೂ ಮಂಗಳೂರು ವಿಮಾನ ನಿಲ್ದಾಣದ ಬಳಿ ಬಾಂಬ್ ಇಟ್ಟ ಬಗ್ಗೆ  ಸುದ್ದಿಯಾಯಿತು. ಬಳಿಕ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಇದಕ್ಕೊಂದು ತಾರ್ಕಿಕ ಅಂತ್ಯ ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಇದರಿಂದ ಜನರು ಪರಸ್ಪರ ಅನುಮಾನ ಪಡುವಂತಾಯಿತು. ಈಗ ಮತ್ತೆ ಗೋಡೆ ಬರಹ ಅದು ಜಿಲ್ಲೆಯ ಹೃದಯ ಭಾಗದಲ್ಲಿ ನಿರಂತರ ವಾಗಿ ನಡೆಯುತ್ತಿದೆ. ಈ ರೀತಿಯ ಕೃತ್ಯ ನಡೆಸುವುದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತ್ವರಿತವಾಗಿ ಬಹಿರಂಗ ಪಡಿಸಬೇಕು. ಇಂತಹ ದೇಶ ದ್ರೋಹಿ ಕ್ರತ್ಯದಲ್ಲಿ ತೊಡಗಿರುವವರನ್ನು ದೇಶದಿಂದಲೇ ಗಡಿಪಾರು ಮಾಡುವುದು ಸೂಕ್ತ. ಸರಕಾರದ ಗುಪ್ತಚರ ಇಲಾಖೆಗಳಿಗೆ ಇದರ ಹಿಂದೆ ಯಾರಿದ್ದಾರೆ ಎಂದು ಏಕೆ ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ. ನಗರದ ಜನರ ಮಧ್ಯೆ ಸಂಶಯ ಮೂಡಿಸುವ ಕೆಲಸ ನಡೆಸುವರನ್ನು ತಕ್ಷಣ ಬಂಧಿಸಿ ಜನರ ಸಂಶಯ ನಿವಾರಣೆ ಮಾಡಬೇಕು. ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸುತ್ತದೆ ಮತ್ತು ಈ ಬಗ್ಗೆ 15 ದಿನಗಳ ಒಳಗೆ ಯಾವೂದೇ ಪತ್ತೆ ಕಾರ್ಯ ನಡೆಯದೆ ಇದ್ದರೆ ಕಾಂಗ್ರೆಸ್ ಉಗ್ರಹೋರಾಟ ನಡೆಸಲು ಹಿಂಜರಿಯುದಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

'ರಾಜ್ಯ ಸರಕಾರ ಕೋಮಾದಲ್ಲಿದೆ'

ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಕೋಮಾದಲ್ಲಿದೆ‌. ಬಡವರ ಪಡಿತರ ಚೀಟಿ ಸಮಸ್ಯೆ, ಮಳೆಹಾನಿ ಪರಿಹಾರದ ಬಗ್ಗೆ ಯಾವೂದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಪಿಂಚಣಿ ಹಣ ಪಾವತಿಯಾಗದೆ ಜನರು ಸಂಕಷ್ಟದಲ್ಲಿದ್ದಾರೆ ಎಂದು ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳಾಲ್, ಪ್ರತಿಭಾ ಕುಳಾಯಿ, ದಿನೇಶ್ ಪೂಜಾರಿ, ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News