ದ.ಕ.ಜಿಲ್ಲೆಯ 13 ಶಾಲೆಗಳಲ್ಲಿ ನಡೆಯದ ಪ್ರವೇಶಾತಿ: ಸರಕಾರಕ್ಕೆ ಅಧಿಕಾರಿಗಳ ವರದಿ
ಮಂಗಳೂರು, ನ.30: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳ ತರಗತಿ ಆರಂಭಗೊಳ್ಳದಿದ್ದರೂ ಕೂಡ 2020-21ನೆ ಶೈಕ್ಷಣಿಕ ವರ್ಷದಲ್ಲಿ ದ.ಕ.ಜಿಲ್ಲೆಯ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಕನ್ನಡ ಹಾಗೂ ಆಂಗ್ಲ ಮಾಧ್ಯಮದ 13 ಶಾಲೆಗಳಲ್ಲಿ ಹೊಸ ಮಕ್ಕಳ ಪ್ರವೇಶಾತಿ ಆಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವರದಿ ಸಿದ್ಧಪಡಿಸಿ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಈ ಶಾಲೆಗಳು ಬಾಗಿಲು ಹಾಕುವುದು ಬಹುತೇಕ ಖಚಿತವಾಗಿದೆ.
ವಿದ್ಯಾರ್ಥಿಗಳ ಹಾಜರಾತಿ ಕಡಿಮೆ, ಶಿಕ್ಷಕರ ನಿವೃತ್ತಿಯ ಬಳಿಕ ತುಂಬಿಸದ ಹುದ್ದೆ, ಹೊಸ ನೇಮಕಾತಿ ನಡೆಯದಿರುವುದು, ಅಕ್ಕಪಕ್ಕ ಸ್ಥಾಪನೆಯಾದ ಅನುದಾನರಹಿತ ಶಾಲೆ, ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ನಲಿಕಲಿ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆ, ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಗುವ ಸವಲತ್ತುಗಳು ಇತ್ಯಾದಿ ಕಾರಣದಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದು ಸಾಮಾನ್ಯವಾಗಿದೆ. ಕೊರೋನ ಹಿನ್ನೆಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭಗೊಳ್ಳದಿದ್ದರೂ ಕೂಡ ಜಿಲ್ಲೆಯ 13 ಶಾಲೆಗಳಲ್ಲಿ 1ನೆ ತರಗತಿಗೆ ಯಾವುದೇ ಪ್ರವೇಶಾತಿ (ಅಡ್ಮಿಶನ್) ನಡೆಯದ ಕಾರಣ ಮುಚ್ಚುವುದು ಅನಿವಾರ್ಯ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ದ.ಕ. ಜಿಲ್ಲೆಯ ಮಂಗಳೂರು ಉತ್ತರ ವಲಯದ 3, ಮಂಗಳೂರು ದಕ್ಷಿಣ ವಲಯದ 2, ಬಂಟ್ವಾಳ ವಲಯದ 1, ಬೆಳ್ತಂಗಡಿ ವಲಯದ 1, ಮೂಡುಬಿದಿರೆ ವಲಯದ 2 ಸಹಿತ 9 ಖಾಸಗಿ ಅನುದಾನಿತ ಶಾಲೆಗಳು ಹಾಗೂ ಬಂಟ್ವಾಳ ವಲಯದ 2, ಬೆಳ್ತಂಗಡಿ ವಲಯದ 1, ಮಂಗಳೂರು ದಕ್ಷಿಣ ವಲಯದ 1 ಸಹಿತ ಖಾಸಗಿ ಅನುದಾನ ರಹಿತ 4 ಶಾಲೆಗಳು ಮುಚ್ಚಲಿವೆ. ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಾಗಿಲು ಹಾಕಿದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಸಂಖ್ಯೆ ಹೆಚ್ಚಿದೆ. ಸಾಮಾನ್ಯವಾಗಿ 10 ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚಲಾಗುತ್ತದೆ. ಆದರೆ ಮರು ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದರೆ ಅದನ್ನು ಪುನಃ ಆರಂಭಿಸುವ ಅವಕಾಶವಿದೆ. ಅದರಂತೆ ಈ ಬಾರಿ ಸುಳ್ಯದ ದೇವರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದೆ. ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಒಮ್ಮೆ ಮುಚ್ಚಿದರೆ ಮತ್ತೆ ತೆರೆಯುವುದಿಲ್ಲ ಎಂದು ದ.ಕ. ಸಮಗ್ರ ಶಿಕ್ಷಣ ಕರ್ನಾಟಕ ಸಂಯೋಜಕಿ ಮಂಜುಳಾ ಕೆ.ಎಲ್. ಅಭಿಪ್ರಾಯಪಡುತ್ತಾರೆ.