ಮುಂದಿನ ವಾರ ಸಂತೆಕಟ್ಟೆ ಸಂತೆ ಶಿಫ್ಟ್: ಸಂಚಾರ ಸಮಸ್ಯೆಗೆ ಮುಕ್ತಿ

Update: 2020-12-06 13:52 GMT

ಉಡುಪಿ, ಡಿ. 6: ಪ್ರತಿ ರವಿವಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದ್ದ ಸಂತೆ ಕಟ್ಟೆಯ ವಾರ ಸಂತೆಯು ಮುಂದಿನ ವಾರದಿಂದ ಹೊಸದಾಗಿ ನಿರ್ಮಿಸಲಾದ ಸಂತೆ ಮಾರುಕಟ್ಟೆಗೆ ಸ್ಥಳಾಂತರಗೊಳ್ಳುತ್ತಿದ್ದು, ಇದರಿಂದ ಹೆದ್ದಾರಿಯಲ್ಲಿನ ಎಲ್ಲ ರೀತಿಯ ಸಮಸ್ಯೆಗಳಿಗೆ ಸದ್ಯವೇ ಮುಕ್ತಿ ದೊರೆಯಲಿದೆ.

ರವಿವಾರ ಮುಂಜಾನೆಯಿಂದಲೇ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯು ಸಂತೆ ಮಾರುಕಟ್ಟೆಯಾಗಿ ಬದಲಾಗುತ್ತದೆ. ಸಂತೆಯಲ್ಲಿ ತರಕಾರಿ ಮಾರಾಟ ಮಾಡು ವವರು ಮತ್ತು ಕೊಳ್ಳುವವರು ಹಾಗೂ ಅವರ ವಾಹನಗಳು ಇಡೀ ರಾಷ್ಟ್ರೀಯ ಹೆದ್ದಾರಿಯನ್ನೇ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಪ್ರತಿವಾರ ಇಲ್ಲಿ ವಾಹನ ಸಂಚಾರದಲ್ಲಿ ತೊಡಕು ಉಂಟಾಗುತ್ತದೆ. ಅಲ್ಲದೆ ಅಪಘಾತಳು ಕೂಡ ಸಂಭವಿಸುತ್ತಿರುತ್ತವೆ.

ಅದೇ ರೀತಿ ಸುಮಾರು ಅರ್ಧ ಕಿ.ಮೀ. ಉದ್ದದವರೆಗಿನ ಸಂತೆಕಟ್ಟೆಯ ಸರ್ವಿಸ್ ರಸ್ತೆಯು ಮಾರುಕಟ್ಟೆಯಾಗಿ ವಿಸ್ತಾರಗೊಳ್ಳುತ್ತದೆ. ಇದರಿಂದ ಸರ್ವಿಸ್ ರಸ್ತೆಯ ವಾಹನಗಳು ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಮತ್ತು ಈ ಜಂಕ್ಷನ್ ನಲ್ಲಿ ನಾಲ್ಕೈದು ರಸ್ತೆಗಳು ಸೇರುವುದರಿಂದ ವಾಹನ ದಟ್ಟನೆ ಉಂಟಾಗಿ ಸಮಸ್ಯೆ ಗಳು ಕಾಡುತ್ತಿರುತ್ತದೆ. ಇದು ಹಲವು ವರ್ಷಗಳಿಂದ ನಗರದ ಸಂಚಾರ ಪೊಲೀಸರಿಗೆ ಬಹಳ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.

ಈ ಎಲ್ಲ ಕಾರಣದಿಂದ ಸಂತೆಕಟ್ಟೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸ ಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯಿಂದ ಗೋಪಾಲಪುರ ವಾರ್ಡ್‌ನ ವೌಂಟ್ ರೋಸರಿ ಚರ್ಚ್ ಮುಂಭಾಗದಲ್ಲಿ ಹೊಸ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ 2018ಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು.

ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವಾರ ಇದರ ಉದ್ಘಾಟನೆ ನೆರ ವೇರಲಿದೆ. ಇದರಿಂದ ಮುಂದಿನ ರವಿವಾರ ದಿಂದ ಸಂತೆಕಟ್ಟೆಯ ರಾ.ಹೆ. ಪಕ್ಕದಲ್ಲಿ ನಡೆಯುತ್ತಿದ್ದ ಸಂತೆಯು ಹೊಸ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲಿದೆ.

17,500 ಚದರ ಅಡಿ ವಿಸ್ತ್ರೀರ್ಣದ ಹೊಸ ಮಾರುಕಟ್ಟೆಯಲ್ಲಿ ಎತ್ತರದ ಕಟ್ಟೆಗಳು ಹಾಗೂ ಕಾಂಕ್ರೀಟ್ ನೆಲಹಾಸಿನಿಂದ ಆಧುನಿಕರಣಗೊಳಿಸಲಾ ಗಿದ್ದು, ಏಕಕಾಲದಲ್ಲಿ 85 ಮಂದಿ ಕುಳಿತು ವ್ಯಾಪಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ, ಕೊಳಚೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಇಂಟರ್‌ಲಾಕ್, ನೀರು ಹಾಗೂ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಂತೆಕಟ್ಟೆಯಲ್ಲಿ ಹಿಂದಿನಿಂದ ವ್ಯಾಪಾರ ಮಾಡುತ್ತಿದ್ದವರಿಗೆ ಹೊಸ ಮಾರುಕಟ್ಟೆ ಯಲ್ಲಿ ಮೊದಲ ಆದ್ಯತೆ ನೀಡಬೇಕು. ನಂತರ ಉಳಿದವರಿಗೆ ಸ್ಥಳಾವಕಾಶ ನೀಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಯಾವುದೇ ಗೊಂದಲ ಉಂಟಾಗದಂತೆ ಕ್ರಮ ತೆಗೆದು ಕೊಳ್ಳಲಾಗುವುದು. ಮುಂದಿನ ವಾರ ನೂತನ ಮಾರುಕಟ್ಟೆಯನ್ನು ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ರವಿವಾರದಿಂದ ಸಂತೆಯು ಹೊಸ ಮಾರುಕಟ್ಟೆಯಲ್ಲಿ ನಡೆಯಲಿದೆ.

-ಸುಮಿತ್ರಾ ಆರ್.ನಾಯಕ್
ಅಧ್ಯಕ್ಷರು, ಉಡುಪಿ ನಗರಸಭೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News