ಪರಿಣಿತರ ಸಮಿತಿಯ ವರದಿಗೆ ಜನಜಾಗೃತಿ ಸಮಿತಿ ಆಕ್ಷೇಪ: ಯುಪಿಸಿಎಲ್‌ಗೆ ಹಸಿರುಪೀಠದ ತಜ್ಞ ಸಮಿತಿ ಮರು ಭೇಟಿ

Update: 2020-12-06 15:55 GMT

ಪಡುಬಿದ್ರೆ ಡಿ.6: ಇಲ್ಲಿನ ಯುಪಿಸಿಎಲ್‌ನಿಂದ ಪರಿಸರದ ಮೇಲಾಗಿರುವ ಹಾನಿಯ ಮರು ಪರಿಶೀಲನೆಗಾಗಿ ಹೊಸದಿಲ್ಲಿಯ ಹಸಿರು ಪೀಠದ (ಗ್ರೀನ್ ಟ್ರಿಬ್ಯೂನಲ್) ತಜ್ಞರ ಸಮಿತಿ ಡಿ.7ರಿಂದ 9ರವರೆಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದೆ.

ಎರಡು ವರ್ಷಗಳ ಹಿಂದೆ ಉಡುಪಿಯಲ್ಲಾದ ಬೂದಿ ಮಳೆ, ಯುಪಿಸಿಎಲ್‌ನಿಂದಾದ ಪರಿಸರದಲ್ಲಾದ ಅಗಾಧ ಪ್ರಮಾಣ ಹಾನಿಯ ಹಿನ್ನೆಲೆಯಲ್ಲಿ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸುತ್ತಿರುವ ಜನಜಾಗೃತಿ ಸಮಿತಿ ನೀಡಿದ ದೂರಿನಂತೆ ಹಸಿರು ಪೀಠ ಯುಪಿಸಿಎಲ್ ವಿರುದ್ಧ ಆದೇಶ ವೊಂದನ್ನು ನೀಡಿ, ಬಳಿಕ ಪರಿಣಿತರ ಸಮಿತಿಯನ್ನು ಪರಿಶೀಲನೆಗೆ ಕಳುಹಿಸಿತ್ತು.

ಪೀಠದ ಆದೇಶದಂತೆ ಈ ಸಮಿತಿ ಪಡುಬಿದ್ರಿಗೆ ಬಂದು ಯುಪಿಸಿಎಲ್ ನಿಂದಾಗಿ ಇಲ್ಲಾದ ಹಾನಿಯನ್ನು ವಿಶ್ಲೇಷಿಸಿ ಸಂಸ್ಥೆಯಿಂದ ಅದುವರೆಗೆ 4.80 ಕೋಟಿ ರೂ. ಮೌಲ್ಯದ ಹಾನಿ ಉಂಟಾಗಿದೆ ಎಂದು ವರದಿ ನೀಡಿತ್ತು.

ಸಮಿತಿಯ ವರದಿಯನ್ನು ಪ್ರಶ್ನಿಸಿ ಜನಜಾಗೃತಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಇದೀಗ ಹಸಿರು ಪೀಠ ತಜ್ಞರ ಸಮಿತಿಯೊಂದನ್ನು ಹಾನಿಯ ಮರುಪರಿಶೀಲನೆಗೆ ಕಳುಹಿಸುತ್ತಿದೆ.

ಸಮಿತಿ ದುಬೈಯಲ್ಲಿರುವ ಬಾಲಕೃಷ್ಣ ಶೆಟ್ಟಿ ಅವರೊಂದಿಗೆ ನಾಳೆ ವೀಡಿಯೋ ಸಂವಾದ ನಡೆಸುವ ಸಾಧ್ಯತೆ ಇದ್ದು, ಮುಂದಿನ ಎರಡು ದಿನ ಯೋಜನಾ ಪ್ರದೇಶಕ್ಕೆ ಭೇಟಿ ನೀಡಲಿದೆ ಎಂದು ಬಲ್ಲಮೂಲಗಳು ತಿಳಿಸಿವೆ. ಯುಪಿಸಿಎಲ್‌ನ ದೋಷಗಳಿಂದ ಮತ್ತು ಪರಿಸರ ನಿಯಮಾವಳಿಗಳ ಉಲ್ಲಂಘನೆಯಿಂದ ಯೋಜನಾ ಅನುಷ್ಠಾನದ ವೇಳೆ ಪರಿಸರದಲ್ಲಿ ಆಗಿರುವ ಬೆಳೆ ಹಾನಿ, ಜನತೆಯ ಆರೋಗ್ಯಕ್ಕಾಗಿರುವ ನಷ್ಟ, ನೀರಿನ ಗುಣಮಟ್ಟ ಕುಸಿತ ಮೊದಲಾದ ಪರಿಸರ ಸಂಬಂಧಿ ವ್ಯತ್ಯಯಗಳನ್ನು ಪರಿಶೀಲಿಸಿ ಈ ಸಮಿತಿಯು ರಾಷ್ಟ್ರೀಯ ಹಸಿರು ಪೀಠಕ್ಕೆ ತನ್ನ ವರದಿ ಯನ್ನು ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News