ಗ್ರಾ.ಪಂ.ಚುನಾವಣೆಯಲ್ಲಿ ಬಹುಮತ ನಮ್ಮದೇ : ಹರ್ಷ ಮೊಯ್ಲಿ

Update: 2020-12-06 16:40 GMT

ಕಾರ್ಕಳ : ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಬಹುಮತ ಕಾಂಗ್ರೆಸ್‍ಗೆ ಬರಲಿದೆ ಎಂದು ರಾಜ್ಯ ಕೆಪಿಸಿಸಿ ವಕ್ತಾರ ಹರ್ಷ ಮೊಯ್ಲಿ ಹೇಳಿದ್ದಾರೆ.

ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಈ ಬಾರಿ ಸಂಘಟಿತವಾಗಿ ಚುನಾವಣೆ ಎದುರಿಸಲಿದೆ. ಈಗಾಗಲೇ ಗ್ರಾಮೀಣ ಮಟ್ಟದಲ್ಲಿ ಅದಕ್ಕೆ ಪೂರಕವಾಗುವ ಸಭೆಗಳು ನಡೆಯುತ್ತಿದೆ. ಯುವಕರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವ ಅಭ್ಯರ್ಥಿಗಳು ಕಣಕ್ಕಿಳಿಸಲಾಗುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಒಟ್ಟು 34 ಗ್ರಾ.ಪಂ.ಗಳಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಿದ್ದೇವೆ. ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹಾಗೂ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರು ಈ ಹಿಂದೆ ನಡೆಸಿದ ಈ ಹಿಂದೆ ಅಭಿವೃದ್ದಿ ಕಾರ್ಯಗಳು ನಮಗೆ ಚುನಾವಣೆ ಎದುರಿಸಲು ಪೂರಕ ವಾತಾವರಣ ಒದಗಿಸಲಿದೆ ಎಂದರು.

ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಎಲ್ಲರೂ ಒಗ್ಗಟ್ಟಾಗಿ ದುಡಿಯಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ಮತ್ತೊಮ್ಮೆ ಅಧಿಕಾರಕ್ಕೆ ತೆರುವ ಪ್ರಯತ್ನಗಳು ತಳಮಟ್ಟದಲ್ಲಿ ನಡೆಯುತ್ತಿದೆ. ಹಿರಿಯ ಅನುಭವಿ ನಾಯಕರುಗಳ ಜತೆಗೆ ಯುವಕರಿಗೆ ಆದ್ಯತೆ ನೀಡುವ ಮೂಲಕ ಪಕ್ಷಕ್ಕೆ ಪುನಶ್ಚೇತನ ಕೊಡುವ ಕೆಲಸಗಳು ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸದಾಶಿವ ದೇವಾಡಿಗ, ಮಂಜುನಾಥ ಪೂಜಾರಿ ಮುದ್ರಾಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ವಕ್ತಾರ ಬಿಪಿನ್‍ಚಂದ್ರಪಾಲ್, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಕಾರ್ಯದರ್ಶಿ ಶೋಭ, ಕಾಂಗ್ರೆಸ್ ಪ್ರಮುಖರಾದ ಇಮ್ತಿಯಾಝ್ ಎಣ್ಣೆಹೊಳೆ, ಜಯಕುಮಾರ್ ಜೈನ್ ಶಿರ್ಲಾಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News